ರಿಪ್ಪನ್‌ಪೇಟೆ: ಧಾರ್ಮಿಕ ಪ್ರವಚನ ಆಲಿಸುವುದಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಸಮೀಪದ ಗವಟೂರು ಶ್ರೀ ರಾಮೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ರುದ್ರ ಹೋಮದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಾರತ ದೇಶಕ್ಕೆ ಗೌರವ ಬಂದಿರುವುದು ಸಂಸ್ಕಾರಯುತ ತಾಯಿಯರಿಂದ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಎಂದು ತಿಳಿಸಿದರು.
ಜೀವನ ವ್ಯವಸ್ಥೆಗೆ ಮಾತು ಬಹಳ ಮುಖ್ಯ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಮಾತು ಮೌಲ್ಯ ಕಳೆದುಕೊಳ್ಳುತ್ತಿದೆ. ಗುರುವಿನ ಆಜ್ಞೆ ಪಾಲಿಸಿದ ಶಿಶುನಾಳ ಷರೀಫರು ಪ್ರಸ್ತುತ ಎಲ್ಲರ ಮನದಲ್ಲಿದ್ದಾರೆ. ವಚನ ಸಾಹಿತ್ಯ ನೀಡಿದ ಬಸವಣ್ಣನವರು ಅಜರಾಮರರಾಗಿದ್ದಾರೆ. ಮಾತಿಗೆ ಶ್ರೇಷ್ಠ ಮಹತ್ವ ತಂದುಕೊಟ್ಟ ದಾರ್ಶನಿಕರ ಸಂದೇಶಗಳ ನಡುವೆಯು ಇಂದು ಮಾತಿಗೆ ಮೌಲ್ಯವಿಲ್ಲದಂತಾಗಿದೆ ಎಂದರು.
40 ವರ್ಷ ಅರ್ಚಕ ಸೇವೆ ಸಲ್ಲಿಸಿದ ಧರ್ಮಣ್ಣ ಅವರಿಗೆ ಸನ್ಮಾನಿಸಿ ಗೌರವಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಗಣೇಶ್‌ರಾವ್, ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ದುಂಡರಾಜಪ್ಪ ಗೌಡ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ, ಗಣಪತಿ ಇತರರಿದ್ದರು.