ಸೊರಬ: ಧಾರ್ಮಿಕ ಶ್ರದ್ಧಾಕೇಂದ್ರ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಡೆಗೆ ಗಮನ ಹರಿಸಬೇಕು ಎಂದು ಶ್ರೀ ಚೊರಟಿ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಹೇಶ್ ಖಾರ್ವಿ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯ ಶ್ರೀ ಚೊರಟಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಹಳೇಸೊರಬ ವಲಯದಿಂದ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ದೇವಸ್ಥಾನ ಅತ್ಯಂತ ಹಳೆಯದಾಗಿದ್ದು ಇದರ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈಗಾಗಲೇ ನೂತನ ಶಿಲಾಮಯ ಮಂಟಪದ ಕಾರ್ಯ ಮುಕ್ತಾಯ ಹಂತದಲ್ಲಿದೆ. ಇನ್ನುಳಿದ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಜ್ಞಾನವಿಕಾಸ ಯೋಜನೆ ಸಂಯೋಜಕಿ ಪ್ರಭಾವತಿ ಮಾತನಾಡಿ, ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಆಶಯದಂತೆ ಧರ್ಮಸ್ಥಳ ಸಂಘದಿಂದ ವರ್ಷದಲ್ಲಿ ಎರಡು ಬಾರಿ ದೇವಸ್ಥಾನಗಳ ಸ್ವಚ್ಛತಾ ಕಾರ್ಯ ನಡೆಸಲಾಗುವುದು ಎಂದರು.
ದೇವಸ್ಥಾನ ಸಮಿತಿ ಖಜಾಂಚಿ ಗಣಪತಿ ಓಟೂರು, ಪ್ರಧಾನ ಅರ್ಚಕ ಫಕೀರಸ್ವಾಮಿ, ಸಹ ಕಾರ್ಯದರ್ಶಿ ಬಸವರಾಜ ಪಾಟೀಲ್, ಟ್ರಸ್ಟ್ ನಿರ್ದೇಶಕ ಮಂಜು, ಧರ್ಮಸ್ಥಳ ಸಂಘದ ವಲಯ ಮೇಲ್ವಿಚಾರಕ ಉಮೇಶ್, ಸೇವಾ ಪ್ರತಿನಿಧಿ ಜಯಲಕ್ಷ್ಮೀ, ಒಕ್ಕೂಟದ ಅಧ್ಯಕ್ಷ ಮುಕುಂದಪ್ಪ ಮತ್ತಿತರರಿದ್ದರು.