ಸೊರಬ: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತಾಲೂಕಿನಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಕಷ್ಟು ಹಣವಿದೆ. ಸಮಸ್ಯೆ ಇರುವ ಗ್ರಾಮಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂಚಿಸಿದರು.
ಸೊರಬ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ರಚಿಸಲಾದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಗ್ರಾಮಗಳಲ್ಲಿ ಕುಡಿಯುವ ನೀರಿನ ಕುರಿತು ಪಿಡಿಒಗಳು, ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹಣದ ಕೊರತೆ ಇಲ್ಲ. ಸರ್ಕಾರ ಹಾಗೂ ಮೇಲಧಿಕಾರಿಗಳಿಗೆ ಮಾಹಿತಿ ನೀಡದ ಅಭಿವೃದ್ಧಿ ಅಧಿಕಾರಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
35 ಗ್ರಾಮಗಳಲ್ಲಿ ತೊಂದರೆ: ಬೆನ್ನೂರು ಗ್ರಾಪಂನ ಉರಗನಹಳ್ಳಿ, ಕಮರೂರು, ಬೆನ್ನೂರು, ಭಾರಂಗಿಯ ಜೋಗಿಹಳ್ಳಿ, ಯಲಿವಾಳ, ಬೆಣ್ಣೆ ಲಗೇರಿ, ಗುಡ್ಡದ ಬೆಣ್ಣೆಗೇರಿ, ಇರಳೆ, ದೂಗೂರು, ಚಂದ್ರಗುತ್ತಿ ಬಸ್ತಿಕೊಪ್ಪ, ಕಡೆ ಜೋಳದಗುಡ್ಡೆ, ಮಳಲಿಕೊಪ್ಪ ಎಣ್ಣೆಕೊಪ್ಪ, ಅಂಡಿಗೆ ಗ್ರಾಪಂ ಉರುಗನಹಳ್ಳಿ ಸೇರಿದಂತೆ 35 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದೆಂದು ಗುರುತಿಸಲಾಗಿದೆ. ಹಲವೆಡೆ ಹೊಸ ಬೋರ್ ಅವಶ್ಯಕತೆ ಇದೆ. ಪಿಡಿಒಗಳು ಪರಿಹಾರ ಕ್ರಮದ ಕುರಿತು ತೀರ್ಮಾನ ಮಾಡಿ ಅಧಿಕಾರಿಗಳಿಗೆ ಕಳಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಸೂಚಿಸಿದರು. ಕುಡಿಯುವ ನೀರಿನ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಮುಂದಿನ ವರ್ಷದಿಂದ ಜೆಜೆಎಂಗೆ ಶರಾವತಿಯಿಂದ ನೀರು ಬರುತ್ತದೆ. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಹಾಗೂ ಕೊರತೆಗಳ ಸಂಪೂರ್ಣ ವರದಿ ನೀಡಬೇಕು. ಸರಿಪಡಿಸುವ ಕೆಲಸ ಆಗುತ್ತದೆ.
ಮಧು ಬಂಗಾರಪ್ಪ
ಜಿಲ್ಲಾ ಉಸ್ತುವಾರಿ ಸಚಿವ
ನೋಡಲ್ ಅಧಿಕಾರಿ ಹನುಮಾ ನಾಯಕ್ ಮಾತನಾಡಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದಾದ 43 ಗ್ರಾಮಗಳಲ್ಲಿ 94.40 ಲಕ್ಷ ರೂ. ವೆಚ್ಚದಲ್ಲಿ ಕೊಳವೆ ಬಾವಿ ಅಳವಡಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಪ್ರಸ್ತುತ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದಾದ ಗ್ರಾಮಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ. ಕೆಲ ಗ್ರಾಮಗಳಲ್ಲಿ ಹೊಸ ಬೋರ್‌ವೆಲ್ ಅವಶ್ಯಕತೆ ಇದ್ದು, 15ನೇ ಹಣಕಾಸು ಆಯೋಗದ ಅನುದಾನದಲ್ಲಿ 8.73 ಕೋಟಿ ರೂ. ಬಾಕಿ ಉಳಿದಿದೆ. ಈ ಅನುದಾನದಿಂದ ಅವಶ್ಯವಿರುವೆಡೆ ಬೋರ್‌ವೆಲ್ ಮಾಡಿಸಿಕೊಡಬಹುದು ಎಂದರು.
ತಾಲೂಕಿನ ಕ್ಷಯಮುಕ್ತ 15 ಗ್ರಾಪಂಗಳಿಗೆ ಬೆಳ್ಳಿ ಮತ್ತು ಕಂಚಿನ ಪದಕ ಪ್ರಶಸ್ತಿಯನ್ನು ಸಚಿವರು ವಿತರಿಸಿದರು. ಸೊರಬ ತಹಸೀಲ್ದಾರ್ ಮಂಜುಳಾ ಹೆಗಡಾಳ್, ಸಾಗರ ತಹಸೀಲ್ದಾರ್ ಚಂದ್ರಶೇಖರ್, ಇಒಗಳಾದ ಡಾ. ಪ್ರದೀಪ್‌ಕುಮಾರ್, ಶಿವಕುಮಾರ್, ಶಿಮುಲ್ ನಿರ್ದೇಶಕ ದಯಾನಂದ ಗೌಡ ಇತರರಿದ್ದರು.