

ಶಿಕಾರಿಪುರ: ಬುದ್ಧ ಜ್ಞಾನದ ಸಾಕ್ಷಿರೂಪ. ಅನುಭಾವದ ಪ್ರತಿರೂಪವಾಗಿದ್ದ ಒಬ್ಬ ಶ್ರೇಷ್ಠ ದಾರ್ಶನಿಕ. ಬುದ್ಧನ ಸಂದೇಶಗಳು ಜಗದಗಲ ಪ್ರಕಾಶಿಸುತ್ತಿವೆ ಎಂದು ಶಿರಸ್ತೇದಾರ್ ವಿನಯ್ ಆರಾಧ್ಯ ಹೇಳಿದರು.
ತಾಲೂಕು ಆಡಳಿತ ಮತ್ತು ಬುದ್ಧ ಅನುಯಾಯಿಗಳು, ದಲಿತ ಪರ ಸಂಘಟನೆಗಳು ಆಯೋಜಿಸಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿ, ಬುದ್ಧ ಪ್ರಸನ್ನತೆಯ ಸಂಕೇತ, ಶಾಂತಿಧೂತ. ಸರ್ವರನ್ನೂ ಪ್ರೀತಿಸಿ ಸರ್ವರ ಹೃದಯಗಳಲ್ಲಿ ಭಗವಂತನ ಇದ್ದಾನೆ. ಸೌಹಾರ್ದತೆ, ಪ್ರೀತಿ, ಕರುಣೆ, ಸಹಬಾಳ್ವೆಯ ಸಂದೇಶ ಸಾರಿದ ಬುದ್ಧ ಸಾಧನೆಯಿಂದಲೇ ತನ್ನ ಆತ್ಮವನ್ನು ಪರಮಾತ್ಮವನ್ನಾಗಿಸಿಕೊಂಡ ಎಂದು ತಿಳಿಸಿದರು.
ಬುದ್ಧನ ಸಂದೇಶಗಳು ಸಾರ್ವಕಾಲಿಕ. ಬುದ್ಧನನ್ನು ಶ್ರೀ ಮಹಾವಿಷ್ಣುವಿನ ಅವತಾರವೆಂದೇ ಪರಿಗಣಿಸಲಾಗುತ್ತಿದೆ. ಬುದ್ಧಗಯಾದಿಂದ ಹೊರಟ ಮಾನವ ಕಲ್ಯಾಣದ ಸಂದೇಶಗಳು ಇವತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಣಬಹುದು ಎಂದರು.
ದಲಿತ ಸೇವಾ ಟ್ರಸ್ಟ್ ಅಧ್ಯಕ್ಷ ತಿಪ್ಪೇಶ್ ಮಾತನಾಡಿ, ಎಲ್ಲರಲ್ಲಿ ಪ್ರೀತಿ ತೊರುವ ಹೃದಯವಂತಿಕೆಯೇ ಬುದ್ಧ ಧರ್ಮ. ಇಲ್ಲಿ ಅಸಮಾನತೆ ಎಂಬುದೇ ಇಲ್ಲ, ಪ್ರತಿಯೊಬ್ಬರೂ ಸಮಾನರು ಎಂದು ತಿಳಿಸಿದರು.
ಗ್ರೇಡ್-2 ತಹಸೀಲ್ದಾರ್ ರವಿಕುಮಾರ್, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರತ್ನಮ್ಮ ಪಾಪಯ್ಯ, ಬುದ್ಧ ಧಮ್ಮ ಟ್ರಸ್ಟ್ ಅಧ್ಯಕ್ಷ ಬೂದೇಶಪ್ಪ, ರಾಚಪ್ಪ, ಚಂದ್ರಕಲಾ, ನಾಗಪ್ಪ, ಸಮಾಜದ ಪ್ರಮುಖರು ಇದ್ದರು.