ರಿಪ್ಪನ್‌ಪೇಟೆ: ಗ್ರಾಮಗಳ ಅಭಿವೃದ್ಧಿಗೆ ರಾಜ ಮಹಾರಾಜರ ಕಾಲದಲ್ಲಿ ಕೆರೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಬಾಳೂರು ಗ್ರಾಪಂ ವ್ಯಾಪ್ತಿ ನೆವಟೂರು ಆನೆಕೆರೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗ್ರಾಮಗಳಲ್ಲಿ ಕೆರೆ ಇದ್ದರೆ ಕೃಷಿ ಕೆಲಸಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಪ್ರಾಣಿ ಪಕ್ಷಿಗಳಿಗೂ ಉಪಯೋಗಕ್ಕೆ ಬರುತ್ತದೆ. ಅಂತರ್ಜಲ ವೃದ್ಧಿಯಾಗುತ್ತದೆ. ಕೊಳವೆ ಬಾವಿಗಳನ್ನು ಕಡಿಮೆ ಮಾಡಿ ಕೆರೆಗಳ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕಿರುವುದು ಇಂದಿನ ಅಗತ್ಯ ಎಂದರು.
ಕ್ಷೇತ್ರದ ಅನೇಕ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ಅನುದಾನದಿಂದ ಅಭಿವೃದ್ಧಿಪಡಿಸುತ್ತಿದ್ದು, ಆನೆಕೆರೆಗೆ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಕೆರೆ ಅಭಿವೃದ್ಧಿಗೆ ಗ್ರಾಮಸ್ಥರು ಗಮನ ಹರಿಸಬೇಕು ಎಂದು ತಿಳಿಸಿದರು. 7 ಎಕರೆ ವಿಸ್ತೀರ್ಣ ಇರುವ ಆನೆಕೆರೆಯನ್ನು ಕೆಲವರು ಅತಿಕ್ರಮಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರೊಂದಿಗೆ ವೀಕ್ಷಣೆ ನಡೆಸಿದ ಶಾಸಕರು, ತಕ್ಷಣ ಕೆರೆ ವ್ಯಾಪ್ತಿಯನ್ನು ಸರ್ವೇ ಮಾಡಿ ಗಡಿ ಗುರುತಿಸಿ ಪುರಾತನ ಕೆರೆದಂಡೆ ಒಡೆದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.
17 ಲಕ್ಷ ರೂ. ವೆಚ್ಚದ ಹಾನಂಬಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಸಮುದಾಯ ಭವನ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ತಹಸೀಲ್ದಾರ್ ರಶ್ಮಿ, ಗ್ರಾಪಂ ಅಧ್ಯಕ್ಷ ಶ್ರೀನಿವಾಸಾಚಾರ್, ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ದಿವಾಕರ, ರೇಖಾ, ರಾಜು, ಪಾರ್ವತಮ್ಮ, ಶಶಿಕಲಾ, ಲೀಲಾವತಿ, ಶಿವಮ್ಮ, ಮುಖಂಡರಾದ ಕಲಸೆ ಚಂದ್ರಪ್ಪ, ಬಿ.ಜಿ.ಚಂದ್ರಮೌಳಿ ಇತರರಿದ್ದರು.