

ಸೊರಬ: ತಾಲೂಕಿನಲ್ಲಿ ಶಿಕ್ಷಕರ ಅವಿರತ ಶ್ರಮದಿಂದಾಗಿ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಶೇ.100ರಷ್ಟು ಪೂರ್ಣವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಹೇಳಿದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಾಗೂ ತಾಲೂಕು ಅಭಿವೃದ್ಧಿ ಕುರಿತ ಕಾಂಗ್ರೆಸ್ ಮುಖಂಡರ ವಿಶ್ಲೇಷಣೆ ಸಭೆಯಲ್ಲಿ ಮಾತನಾಡಿ, ಸಮೀಕ್ಷೆ ಕಾರ್ಯವನ್ನು ಶಿಕ್ಷಕರು ತಾಲೂಕಿನಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಘೋಷಣೆ ಬಗ್ಗೆ ವಿರೋಧಿಸಿದ ಬಿಜೆಪಿ ಬೇರೆ ರಾಜ್ಯದ ಚುನಾವಣೆಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ. ಜಿಎಸ್ಟಿ ತೆರಿಗೆ ಹೆಚ್ಚಿಸಿ ಸಾಮಾನ್ಯ ಜನರನ್ನು ಶೋಷಿಸಿ ನಂತರ ಇಳಿಸಿ ಸಂಭ್ರಮಿಸುವ ಮನಸ್ಥಿತಿ ಹೊಂದಿದ್ದಾರೆ ಎಂದು ಹೇಳಿದರು.
ಜನರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆಯನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮೀಕ್ಷೆ ಕಾರ್ಯಕ್ಕೆ ಸೂಚಿಸಿದ್ದಾರೆ. ಸಮೀಕ್ಷೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗೆ ರಜೆ ಮುಂದೂಡಿ ಸಮೀಕ್ಷೆಯನ್ನು ಸಮಾರೋಪಾದಿಯಲ್ಲಿ ನಡೆಸಲು ಸೂಚಿಸಿದ್ದಾರೆ. ತಬಲಿ ಬಂಗಾರಪ್ಪ ಜಿಪಂ ಮಾಜಿ ಸದಸ್ಯ
ಸಚಿವ ಮಧು ಬಂಗಾರಪ್ಪ ಅವರು ಚಂದ್ರಗುತ್ತಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿ, ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಆರಂಭಗೊಂಡಿದೆ. ರಸ್ತೆ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ತಾಲೂಕು ಬಗರ್ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್ ಮಾತನಾಡಿ, ತಾಲೂಕಿನಲ್ಲಿ 322 ವಿಭಾಗ ಮಾಡಿ 322 ಶಿಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. 60 ಪ್ರಶ್ನೆಗಳಿಗೆ ತಾಳ್ಮೆಯಿಂದ ಮಾಹಿತಿ ಪಡೆದಿದ್ದಾರೆ. ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಸಮಾಧಿ ಸ್ಥಳವನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ಘೋಷಿಸಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಪ್ರವೀಣಕುಮಾರ್, ಆಶ್ರಯ ಸಮಿತಿ ಸದಸ್ಯ ನೆಹರು, ಮುಖಂಡರಾದ ಜಯಶೀಲ ಗೌಡ, ಪ್ರಕಾಶ್, ಸತ್ಯನಾರಾಯಣ, ದರ್ಶನ್, ರಶೀದ್ ಸಾಬ್, ನಾಗಪ್ಪ, ಆಫ್ರಿನಾ ಬಾನು, ಈರೇಶ್ ಮೇಸ್ತ್ರಿ, ಶಿವಣ್ಣ, ರಾಘು, ಈಶ್ವರ್ ಇತರರಿದ್ದರು.