ಮಕ್ಕಳ ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸಿ

9sgr2
ಸಾಗರದಲ್ಲಿ ಆಯೋಜಿಸಿದ್ದ 17ವರ್ಷದೊಳಗಿನ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಬಿ.ಆರ್.ಜಯಂತ್, ಇ.ಪರಶುರಾಮಪ್ಪ ಇತರರಿದ್ದರು.
Published on

ಸಾಗರ: ಮಕ್ಕಳಿಗೆ ಶಿಕ್ಷಣದ ಜತೆಗೆ ಬಾಲ್ಯದಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದರು.

ನಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 17 ವರ್ಷದೊಳಗಿನ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಓದಿನ ಜತೆ ಕ್ರೀಡೆಯಲ್ಲೂ ಆಸಕ್ತಿ ಹೊಂದಬೇಕು. ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡುತ್ತಿದೆ. ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಸೌಲಭ್ಯ ನೀಡಲಾಗುತ್ತಿದೆ. ದೈಹಿಕ ಶಿಕಣ ಶಿಕ್ಷಕರ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ಕ್ರೀಡಾಕೂಟಗಳಿಗೆ ಸರ್ಕಾರದ ಸಹಾಯಧನ ಕಡಿಮೆ ಇದೆ. ದಾನಿಗಳು, ಸಂಘ ಸಂಸ್ಥೆಗಳ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ಸು ಕಾಣುತ್ತವೆ. ಜಿಲ್ಲಾ ಮಟ್ಟದ ಪಂದ್ಯಾವಳಿ ನಡೆಯುವಾಗ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ಶಿಕ್ಷಣಾಧಿಕಾರಿಗೆ ಸೂಚಿಸಿದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಬದುಕಿಗೆ ಓದು ಎಷ್ಟು ಮುಖ್ಯವೋ, ಕ್ರೀಡೆಯೂ ಅಷ್ಟೇ ಪ್ರಮುಖ. ಕ್ರೀಡೆ ಮನಸ್ಸಿನ ಆರೋಗ್ಯ ಕಾಪಾಡುತ್ತದೆ ಎಂದು ತಿಳಿಸಿದರು. ನಗರಸಭಾ ಸದಸ್ಯ ಗಣಪತಿ ಮಂಡಗಳಲೆ, ಬಿಇಒ ಇ.ಪರಶುರಾಮಪ್ಪ, ಸೂರ್ಯನಾರಾಯಣ ಖಂಡಿಕಾ, ಸತ್ಯನಾರಾಯಣ, ಭೂಮೇಶ್, ಸೈಯದ್ ಜಾಕೀರ್, ಸುಬ್ರಹ್ಮಣ್ಯ, ರಮೇಶ್, ವಿಜಯಲಕ್ಷ್ಮೀ, ಡಾ. ಟಿ.ಎಸ್.ರಾಘವೇಂದ್ರ, ಎಂ.ಪ್ರಕಾಶ್, ಅವನಿ, ಶಂಕರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net