

ಒಂದು ಕಾಲಕ್ಕೆ ಚಿತ್ರವೊಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಒಂದು ತಿಂಗಳಿಗೇ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ, ಕಳೆದ ಐದು ತಿಂಗುಗಳಿಂದ, ಚಿತ್ರಮಂದಿರಗಳಲ್ಲೇ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಹಾಗಾಗಿ ಹೊಸ ಚಿತ್ರಗಳನ್ನು ಟಿವಿಯಲ್ಲಿ ನೋಡುವ ಭಾಗ್ಯವನ್ನು ಪ್ರೇಕ್ಷಕರು ಕಳೆದುಕೊಂಡಿದ್ದಾರೆ ಎಂದರೆ ತಪ್ಪಿಲ್ಲ.
ಇದೀಗ, ಜೀ಼ ಕನ್ನಡದಲ್ಲಿ ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್' ಚಿತ್ರವು ಪ್ರೀಮಿಯರ್ ಆಗುತ್ತಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಜೆ 7 ಗಂಟೆಗೆ, ಈ ಚಿತ್ರ ಟಿವಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗುತ್ತಿದೆ.
ಶುಕ್ರವಾರವಷ್ಟೇ, ಜೀ5ನಲ್ಲಿ 'ಶಿವಾಜಿ ಸುರತ್ಕಲ್'ನ ಡಿಜಿಟಲ್ ಪ್ರೀಮಿಯರ್ ಆಗಿತ್ತು. ಸದ್ಯದಲ್ಲೇ ಟಿವಿಯಲ್ಲಿ ಪ್ರಸಾರವಾಗುತ್ತದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿಕೊಂಡಿದ್ದರು. ಆದರೆ, ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇರುವಾಗಲೇ, ಆಗಸ್ಟ್ 15ರಂದು 'ಶಿವಾಜಿ ಸುರತ್ಕಲ್' ಪ್ರಸಾರವಾಗಲಿದೆ.
ಇದು ರಮೇಶ್ ಅರವಿಂದ್ ಅವರ 101ನೇ ಚಿತ್ರವಾಗಿದ್ದು, ಸಿನಿಮಾದಲ್ಲೂ ಪತ್ತೇದಾರ ಶಿವಾಜಿ ಸುರತ್ಕಲ್ ತನ್ನ 101ನೇ ಪ್ರಕರಣದ ರಹಸ್ಯ ಭೇದಿಸಲು ಪ್ರಯತ್ನಿಸುತ್ತಾರೆ ಎನ್ನುವುದು ವಿಶೇಷ. ಶಿವಾಜಿ ಸುರತ್ಕಲ್ನ ಪಾತ್ರದಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದು, ಅವರೊಂದಿಗೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್ ನಟಿಸಿದ್ದಾರೆ. ಮಿಕ್ಕಂತೆ ರಘು ರಾಮನಕೊಪ್ಪ, ರೋಹಿತ್ ಭಾನುಪ್ರಕಾಶ್, ಸತೀಶ್ಚಂದ್ರ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ರಣಗಿರಿಯ ರೆಸಾರ್ಟ್ ನಲ್ಲಿ ಮಂತ್ರಿಯ ಮಗನ ಕೊಲೆ ನಡೆಯುತ್ತದೆ. ಆ ಕೊಲೆಯನ್ನು ತನಿಖೆ ಮಾಡುವ ಅಧಿಕಾರಿಯೇ ಶಿವಾಜಿ ಸುರತ್ಕಲ್. ಈತ ಒಬ್ಬ ಚಾಣಾಕ್ಷ ಅಧಿಕಾರಿಯಾಗಿದ್ದು ಆತನ ಹಿಂದಿನ ಎಲ್ಲ ಪ್ರಕರಣಗಳಿಗಿಂತ ಅತ್ಯಂತ ಕಗ್ಗಂಟಿನ ಪ್ರಕರಣ ಇದಾಗಿರುತ್ತದೆ. ಅದನ್ನು ಹೇಗೆ ಭೇದಿಸುತ್ತಾನೆ ಎನ್ನುವುದೇ ಈ ಚಿತ್ರದ ಕಥೆ.