

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಸಿಕ್ಕಾಪಟ್ಟೆ ಚಚೆರ್ಗಳಾಗುತ್ತಿವೆ. ಅಷ್ಟೇ ಅಲ್ಲ, ಬಹಳಷ್ಟು ಸೆಲೆಬ್ರಿಟಿಗಳು ಬಹಿರಂಗವಾಗಿ ತಮಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಮಾತನಾಡುತ್ತಿದ್ದಾರೆ.
ಈ ಬಗ್ಗೆ ಇದೀಗ, ನಟಿ ಸುಚಿತ್ರಾ ಕೃಷ್ಣಮೂರ್ತಿ ಸಹ ಮಾತನಾಡಿದ್ದಾರೆ. ನೆಪೋಟಿಸಂಗಿಂತ ಚಮಚಾಗಿರಿ ಇನ್ನೂ ಅಪಾಯಕಾರಿ ಎಂದು ಅವರು ಹಢಳಿದ್ದಾರೆ. ಅಷ್ಟೇ ಅಲ್ಲ, ಈ ವಿಷಯವಾಗಿ ಅವರು ನಟಿ ನೇಹಾ ಧೂಪಿಯಾ ಅವರನ್ನು ಉದಾರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸಮರ ಸಾರಬೇಕಾಗಿರುವುದು ನೆಪೋಟಿಸಂ ವಿರುದ್ಧ ಅಲ್ಲ, ಅದಕ್ಕೂ ಭಯಂಕರವಾಗಿರುವ ಚಮಚಾಗಿರಿ ವಿರುದ್ಧ. ಅಲ್ಲೇ, ಈ ನೇಹಾ ಧೂಪಿಯಾ ಅಷ್ಟೊಂದು ಟಾಕ್ ಶೋಗಳಲ್ಲಿ ಭಾಗವಹಿಸಿದ್ದು ಹೇಗೆ. ಆಕೆ ಮಿಸ್ ಇಂಡಿಯಾ 2002 ಆಗಿದ್ದರು ಮತ್ತು ಕರಣ್ ಜೋಹರ್ ಅವರ ಬೆಸ್ಟ್ ಫ್ರೆಂಡ್ ಆಗಿರುವುದು ಬಿಟ್ಟರೆ, ಅವರಿಗೆ ಅಷ್ಟೊಂದು ಅವಕಾಶಗಳು ಹೇಗೆ ಸಿಗುತ್ತದೆ? ಅವರು ಯಾವ ದೊಡ್ಡ ಸ್ಟಾರ್ನ ಮಗಳೂ ಅಲ್ಲ ಅಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
ಈ ಮೂಲಕ, ಕರಣ್ ಜೋಹರ್ಗೆ ಚಮಚಾಗಿರಿ ಮಾಡುವುದರಿಂದಲೇ ನೇಹಾಗೆ ಅಷ್ಟೊಂದು ಅವಕಾಶಗಳು ಸಿಗುತ್ತಿವೆ ಎಂದು ಆರೋಪಿಸಿದ್ದಾರೆ. ಸುಚಿತ್ರಾ ಹೇಳುವುದರಲ್ಲಿ ಪೂರ್ತಿ ತಪ್ಪೇನೂ ಇಲ್ಲ. ಮಿಸ್ ಇಂಡಿಯಾ ಆಗಿದ್ದ ನೇಹಾ, ಆ ನಂತರ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದರು. ಅಷ್ಟೇನೂ ದೊಡ್ಡ ಹೆಸರು ಮಾಡದ ಅವರು, ಈ ಮಧ್ಯೆ ಮದುವೆಯಾದರು.
ಅಂಗದ್ ಬೇಡಿ ಅವರನ್ನು ಮದುವೆಯಾಗಿದ್ದ ನೇಹಾ, ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ರಿಯಾಲಿಟಿ ಮತ್ತು ಟಾಕ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರಣ್ ಜೋಹರ್ ಅವರಿಗೆ ಹತ್ತಿರವಾಗಿರುವುದರಿಂದಲೇ, ಆಕೆಗೆ ಅವಕಾಶಗಳು ಸಿಗುತ್ತಿವೆ ಎಂದು ಹೇಳಲಾಗುತ್ತಿದೆ.
ಇಷ್ಟಕ್ಕೂ ಸುಚಿತ್ರಾಗೆ ಯಾಕೆ ನೇಹಾ ಮೇಲೆ ಸಿಟ್ಟು? ಅವರ್ಯಾಕೆ ನೇಹಾ ಮೇಲೆ ಈ ಚಮಚಾಗಿರಿಯ ಆರೋಪ ಹೊರಿಸಿದ್ದಾರೆ ಎಂಬ ವಿಷಯ ಇನ್ನಷ್ಟೇ ಗೊತ್ತಾಗಬೇಕಿದೆ.