

ಕಮಲ್ ಹಾಸನ್ ನಾಯಕತ್ವದ ಇಂಡಿಯನ್ 2 ಸಿನಿಮಾ ಫೆಬ್ರವರಿಯಲ್ಲಿ ದೊಡ್ಡ ಮಟ್ಟದ ಸುದ್ದಿಯಲ್ಲಿತ್ತು. ಶೂಟಿಂಗ್ ಸೆಟ್ನಲ್ಲಿ ನಡೆದ ಕ್ರೇನ್ ದುರಂತದಲ್ಲಿ ಮೂವರು ಟೆಕ್ನಿಷಿಯನ್ಗಳು ಸಾವನ್ನಪ್ಪಿದ್ದರು. 10ಕ್ಕೂ ಹೆಚ್ಚು ಮಂದಿ ಗಂಭೀರ ಸ್ವರೂಪದಲ್ಲಿ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದ ಕರಾಳತೆ ಅರಿತ ಚಿತ್ರ ನಿರ್ಮಾಣ ಸಂಸ್ಥೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಘೋಷಿಸಿಕೊಂಡಿತ್ತು. ಇದೀಗ ಆ ಮೊತ್ತವನ್ನು ಸಂಬಂಧಪಟ್ಟ ಕುಟುಂಬಗಳಿಗೆ ಹಸ್ತಾಂತರಿಸಿದೆ.
ಅಪಘಾತದಲ್ಲಿ ಮೂರು ಜನ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರತಿ ಕುಟುಂಬಕ್ಕೂ ತಲಾ ಒಂದು ಕೋಟಿ ಮೊತ್ತವನ್ನು ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ವಿತರಣೆ ಮಾಡಿದೆ. ಗಾಯಗೊಂಡ 10 ಜನರಿಗೂ ಪರಿಹಾರದ ರೂಪದಲ್ಲಿ ಒಟ್ಟು 90 ಲಕ್ಷ ಮೀಸಲಿರಿಸಿದ್ದು, ಅದನ್ನೂ ನೀಡುವ ಕಾರ್ಯ ಚಾಲ್ತಿಯಲ್ಲಿದೆ.
ಶೂಟಿಂಗ್ ಸ್ಥಳದಲ್ಲಿ ಕಮಲ್ ಹಾಸನ್, ನಾಯಕಿ ಕಾಜಲ್ ಅಗರ್ವಾಲ್, ನಿರ್ದೇಶಕ ಶಂಕರ್ ಸಹ ಇದ್ದರು. ಈ ಘಟನೆಯ ಕೂಗಳತೆ ದೂರದಲ್ಲಿಯೇ ಇದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ಆ ಘಟನೆಗೆ ಸಂಬಂಧಿಸಿದಂತೆ ಮೃತ ಕುಟುಂಬಗಳಿಗೆ ಪರಿಹಾರ ನೀಡುತ್ತಿರುವ ಲೈಕಾ ಸಂಸ್ಥೆಯ ಈ ನಡೆಗೆ ಕಮಲ್ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ತಮಿಳು ನಾಡಿನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅಲ್ಲಿನ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಸೆಪ್ಟೆಂಬರ್ ವೇಳೆಗೆ ಶೂಟಿಂಗ್ಗೆ ವಿನಾಯಿತಿ ಸಿಗುವ ಸಾಧ್ಯತೆಗಳಿದ್ದು, ಇಂಡಿಯನ್ 2 ಚಿತ್ರವೂ ಶೂಟಿಂಗ್ ಆರಂಭಿಸುವ ಸಾಧ್ಯತೆ ಇದೆ. (ಏಜೆನ್ಸೀಸ್)