

ಉಪ್ಪಳ: ಮುಂದಿನ ವರ್ಷ ಉಡುಪಿಯ ಶ್ರೀಕೃಷ್ಣ ಪೂಜಾ ಪರ್ಯಾಯ ಪೀಠಾರೋಹಣಗೈಯಲಿರುವ ಶೀರೂರು ಮಠಾಧೀಶ ಶ್ರೀ ವೇದವರ್ದನ ತೀರ್ಥ ಶ್ರೀ ಪಾದಂಗಳವರು ಭಾನುವಾರ ತಮ್ಮ ಪಟ್ಟದ ದೇವರ ಸಹಿತರಾಗಿ ಕೊಂಡೆವೂರು ಮಠಕ್ಕೆ ಆಗಮಿಸಿ ಮೊಕ್ಕಾಂ ಹೂಡಿದರು.
ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳು ಭಕ್ತವೃಂದದೊಡನೆ ಯತಿವರ್ಯರನ್ನು ಪೂರ್ಣಕುಂಭದೊಡನೆ ಸ್ವಾಗತಿಸಿದರು. ಬಳಿಕ ಶ್ರೀ ಗಾಯತ್ರೀ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀಗಳು ಪೂಜ್ಯ ಶೀರೂರು ಶ್ರೀಗಳಿಗೆ ಗೌರವಾರ್ಪಣೆ ಸಲ್ಲಿಸಿದರು. ಶೀರೂರು ಶ್ರೀಗಳು ತಮ್ಮ ಆಶೀರ್ವಚನದೊಂದಿಗೆ ಪರ್ಯಾಯ ಮಹೋತ್ಸವಕ್ಕೆ ಸಮಸ್ತರನ್ನು ಆಮಂತ್ರಿಸಿದರು. ಕೊಂಡೆವೂರು ಶ್ರೀಗಳು ಆಶೀರ್ವಚನಗೈದರು. ಮಂಜುನಾಥ ಉಡುಪ ಉಪಸ್ಥಿತರಿದ್ದರು.
ಗಾಯತ್ರಿ ಮತ್ತು ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆಗೈದರು. ವಕೀಲ ಕೆ.ಯಂ.ಗಂಗಾಧರ ಕೊಂಡೆವೂರು ಆಶ್ರಮದ ಸಂಕ್ಷಿಪ್ತ ಮಾಹಿತಿ ನೀಡಿ, ಸ್ವಾಗತಿಸಿದರು. ದಿನಕರ್ ಹೊಸಂಗಡಿ ನಿರೂಪಿಸಿದರು.
ಪ್ರಮುಖರಿಂದ ಸ್ವಾಗತ
ಮಂಜೇಶ್ವರ ತಾಲೂಕಿನ ಅನೇಕ ದೇವಾಲಯಗಳು, ಭಜನಾಮಂದಿರಗಳು, ಸಂಘ-ಸಂಸ್ಥೆಗಳ ಪ್ರಮುಖರು ಶೀರೂರು ಶ್ರೀಗಳಿಗೆ ಗೌರವಾರ್ಪಣೆ ಸಲ್ಲಿಸಿದರು. ಶ್ರೀಗಳು ತೊಟ್ಟಿಲು ಪೂಜಾಸೇವೆ ಮತ್ತು ಮಂಗಳವಾರ ಬೆಳಗ್ಗೆ ತಮ್ಮ ಪಟ್ಟದ ದೇವರ ಪೂಜೆಗಳನ್ನು ಕೊಂಡೆವೂರು ಮಠದ ಮೊಕ್ಕಾಂನಲ್ಲಿ ನೆರವೇರಿಸಿದರು.