

ಪುತ್ತೂರು: ಆಸ್ಪತ್ರೆಗಳು ಮೆಡಿಕಲ್ ಕಾಲೇಜಿನ ಆತ್ಮವಾಗಿದ್ದು, ಈ ನಿಟ್ಟಿನಲ್ಲಿ ಸುಸಜ್ಜಿತ ಆಸ್ಪತ್ರೆಯ ಅಗತ್ಯ ಬಹಳಷ್ಟಿದೆ. ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲವನ್ನು ಖಾಸಗೀಕರಣದ ಮೂಲಕ ಜನರನ್ನು ಮರುಳು ಮಾಡಲಾಗುತ್ತಿದೆ. ಕಟ್ಟಡಗಳನ್ನು ಉತ್ತಮವಾಗಿ ನಿರ್ಮಾಣ ಮಾಡಿದ ತಕ್ಷಣ ಉತ್ತಮ ಸೇವೆ ಸಿಗುವುದಿಲ್ಲ. ಆರೋಗ್ಯದಲ್ಲಿ ಖಾಸಗಿ ಸಹಭಾಗಿತ್ವ ವಿಧಾನ ಸರಿಯಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲದೆ ಮೆಡಿಕಲ್ ಕಾಲೇಜು ನಿರ್ಮಾಣ ಅಸಾಧ್ಯ ಎಂದು ಸಾರ್ವಜನಿಕ ಆರೋಗ್ಯ ಮತ್ತು ಕಾನೂನು ತಜ್ಞ ಡಾ. ಪ್ರೇಮದಾಸ್ ಪಿಂಟೋ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ವತಿಯಿಂದ ಖಾಸಗಿ ಸಹಭಾಗಿತ್ವ (ಪಿಪಿಪಿ ಮಾಡೆಲ್) ಮೆಡಿಕಲ್ ಕಾಲೇಜು ಜನಾರೋಗ್ಯಕ್ಕೆ ಮಾರಕವೇ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದ ಉಚಿತ ವ್ಯವಸ್ಥೆಯಲ್ಲಿ ಕಲಿತವರು ಜನರಿಗೆ ಸೇವೆ ನೀಡುತ್ತಿಲ್ಲ. ಗ್ರಾಮೀಣ ಸೇವೆಯನ್ನು ನಡೆಸಬೇಕಾದ ವೈದ್ಯರು ಕಾರ್ಪೊರೇಟ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಆಸ್ಪತ್ರೆ ನಿರ್ಮಿಸಿ, ಖಾಸಗಿ ವ್ಯವಸ್ಥೆಗೆ ಹಸ್ತಾಂತರ ಮಾಡುವುದಿಂದ ನಾಗರಿಕರನ್ನು ಸುಲಿಯುವ ಕಾರ್ಯವಾಗಬಹುದು. ಜನರ ಆರೋಗ್ಯಕ್ಕಾಗಿ ಸರ್ಕಾರದ ಕೈಯಲ್ಲಿ ಹಣವಿಲ್ಲದಿರುವುದು ದುರಂತವಾಗಿದೆ ಎಂದರು.
*ವಿವಿಧ ನಿರ್ಣಯ: ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳು ಬರುವುದರಿಂದ ಜನರಿಗಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿಸುವ ಜತೆಗೆ ಸರ್ಕಾರಕ್ಕೆ ಇಂತಹ ಯೋಜನೆಯನ್ನು ಕೈಬಿಡುವ ಬಗ್ಗೆ ಬೇಡಿಕೆ ಸಲ್ಲಿಸಬೇಕಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಕೆಲಸಗಳನ್ನು ಸರ್ಕಾರ ತಕ್ಷಣ ಮಾಡುವಂತೆ ಹಕ್ಕೊತ್ತಾಯ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತು.
ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಹೋರಾಟ ಸಮಿತಿ ಅಧ್ಯಕ್ಷ ಎಂ. ಬಿ. ವಿಶ್ವನಾಥ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಲಾಭವೊಂದೇ ಮುಖ್ಯವಲ್ಲ
ಆರೋಗ್ಯ ಸೇವೆಯಾಗಬೇಕೇ ಹೊರತು ಉದ್ಯಮವಾಗಿ ಲಾಭ ಮಾಡುವುದೇ ಮುಖ್ಯ ಉದ್ದೇಶ ಆಗಬಾರದು. ರೋಗಿಗಳ ಸಮಸ್ಯೆಯನ್ನು ಹೇಳಿಕೊಳ್ಳಲು ಸರಿಯಾದ ವೇದಿಕೆಯಿಲ್ಲವಾಗಿದ್ದು, ರೋಗಿಯ ಹಕ್ಕಿನ ಬಗ್ಗೆ ಮಾತನಾಡುವ ಕೆಲಸದ ಜತೆಗೆ ಮೆಡಿಕಲ್ ರೆಗ್ಯುಲೇಶನ್ ಆಕ್ಟ್ ಜಾರಿಯಾಗಬೇಕಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ಆರೋಗ್ಯವನ್ನು ವ್ಯಾಪಾರೀಕರಣ ಮಾಡುತ್ತಿರುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ಕಳಪೆ ಇರುವ ಆಸ್ಪತ್ರೆಯನ್ನು ಪಿಪಿಪಿ ಮಾಡುವ ಬದಲು ಉತ್ತಮ ಆಸ್ಪತ್ರೆಗಳ ಹಸ್ತಾಂತರ ನಡೆಯುತ್ತಿದೆ. ಖಾಸಗೀಕರಣದ ಹಸ್ತಾಂತರ ಆದ ಬಳಿಕ ಒಳಗೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿಯಲ್ಲ.
| ಡಾ. ಪ್ರೇಮದಾಸ್ ಪಿಂಟೋ
ಸಾರ್ವಜನಿಕ ಆರೋಗ್ಯ ಮತ್ತು ಕಾನೂನು ತಜ್ಞರು
///ಕೋಟ್ಸ್///
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೂಕ್ಷ್ಮ ಮನಸ್ಸಿನ ಜನರಿದ್ದು, ಆಸ್ಪತ್ರೆಗಳೂ ಉತ್ತಮವಾಗಿ ನಡೆಯುತ್ತಿವೆ. ಆರೋಗ್ಯ ಮತ್ತು ಶಿಕ್ಷಣವನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಪಿಪಿಪಿ ಬಗ್ಗೆ ಪುತ್ತೂರಿನಲ್ಲಿ ಹಚ್ಚಿದ ಕಿಡಿ ಕರ್ನಾಟಕದಾದ್ಯಂತ ವ್ಯಾಪಿಸಿ ಪ್ರಯೋಜನ ಸಿಗುವಂತಾಗಬೇಕು. ಮೆಡಿಕಲ್ ಕಾಲೇಜಿನ ಮೂಲಕ ಜಾಗೃತ ಸಮಾಜ ಎಚ್ಚೆತ್ತುಕೊಳ್ಳಬೇಕು.
| ಅಣ್ಣಾ ವಿನಯಚಂದ್ರ
ಗೌರವಾಧ್ಯಕ್ಷರು, ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ