ಶಿರಾ ಬೈ ಎಲೆಕ್ಷನ್​; ಕಾಂಗ್ರೆಸ್​ ಸಭೆಯಲ್ಲಿ ಅಸಮಾಧಾನದ ಹೊಗೆ

Shira Election
Published on

ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್​, ಪಕ್ಷದಲ್ಲಿನ ಆಂತರಿಕ ಕಲಹ ನಿವಾರಣೆಯಲ್ಲಿ ಮಗ್ನವಾಗಿದೆ.

ಟಿ.ಬಿ.ಜಯಚಂದ್ರ ವಿರುದ್ಧ ಕಣಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸಿದ್ದ ಕೆ.ಎನ್​.ರಾಜಣ್ಣ, ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ಕೊಟ್ಟಿದ್ದರು. ಅಲ್ಲದೆ, ಕಾಂಗ್ರೆಸ್ ಟಿಕೆಟ್​ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಬಳಿ ಬೇಡಿಕೆಯನ್ನೂ ಇಟ್ಟಿದ್ದರು. ತುಮಕೂರು ಜಿಲ್ಲೆಯಲ್ಲಿ ನನ್ನಿಂದ ನಿಮಗೆ ಸಹಾಯಬೇಕು. ಆದರೆ ಸರ್ಕಾರ ಬಂದಾಗ ನಮ್ಮನ್ನು ಗುರುತಿಸಲ್ಲ‌ ಎಂದು ಆಕ್ರೋಶ ಹೊರಹಾಕಿದ್ದರು. ಈ ಅಸಮಾಧಾನದ ಗಂಭೀರತೆ ಅರಿತ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ತುಮಕೂರು ಜಿಲ್ಲೆಯ ಮುಖಂಡರ ಸಭೆ ನಡೆಸಿದ್ದಾರೆ. ಇದನ್ನೂ ಓದಿರಿ ಶಿರಾ ಉಪಚುನಾವಣೆ- ರಾಜಣ್ಣ ಆಸೆಗೆ ತಣ್ಣೀರೆರಚಿದ ಡಿಕೆಶಿ

ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಸಮಾಧಾನ ಹೊರಹಾಕಿದ ರಾಜಣ್ಣ, ಶಿರಾ ನನಗೆ ಹೊಸದಲ್ಲ. ಕೊನೆಯ ಚುನಾವಣೆಯಲ್ಲಿ ನನ್ನ ಸೋಲಿಗೆ ನಮ್ಮದೇ ಪಕ್ಷದ ನಾಯಕರ ಕೈವಾಡವಿತ್ತು ಎಂದು ಆಕ್ರೋಶ ಹೊರಹಾಕಿದರು. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಟ್ಟು ಒಂದಾಗಿ ಕೆಲಸ ಮಾಡಿ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ತುಮಕೂರು ಜಿಲ್ಲೆಯ ಕಾಂಗ್ರೆಸ್​ ಮುಖಂಡರಿಗೆ ಸಲಹೆ ನೀಡಿದ್ದಾರೆ.

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸಚಿವ ಜಯಚಂದ್ರ, ಮಾಜಿ ಸಂಸದರಾದ ಎಸ್​.ಪಿ. ಮುದ್ದಹನುಮೇಗೌಡ, ಚಂದ್ರಪ್ಪ, ಮಾಜಿ ಶಾಸಕ ಷಡಕ್ಷರಿ ಹಾಗೂ ರಾಜಣ್ಣ ಪುತ್ರ ರಾಜೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net