

ನವದೆಹಲಿ: ಭಾರತದ ಬಹುತೇಕ ಕ್ರಿಕೆಟಿಗರು ಲಂಡನ್ಗೆ ತೆರಳುವ ಸಲುವಾಗಿ ಮುಂಬೈನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಒಳಗೊಂಡ ಬಳಗ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಇತ್ತ, ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡಕ್ಕೆ ನಾಯಕ ಯಾರಾಗಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಭಾರತದ ವೇಗಿ ದೀಪಕ್ ಚಹರ್ ಮಾತ್ರ ಹಿರಿಯ ಬ್ಯಾಟ್ಸ್ಮನ್ ಶಿಖರ್ ಧವನ್ ಅವರೇ ಲಂಕಾ ಪ್ರವಾಸಕ್ಕೆ ತಂಡ ಮುನ್ನಡೆಸಲಿ ಎಂದು ಹೇಳಿದ್ದಾರೆ.
ನಾಯಕತ್ವ ಸ್ಥಾನಕ್ಕೆ ಶಿಖರ್ ಭಾಯ್ ಸೂಕ್ತ ಆಯ್ಕೆ. ಹಲವು ವರ್ಷಗಳಿಂದ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದಾರೆ. ತಂಡದ ಹಿರಿಯ ಆಟಗಾರನಾಗಿರುವುದರಿಂದ ಅವರೇ ನಾಯಕನಾಗುವುದು ಸೂಕ್ತ ಎಂದು ಹೇಳಿದ್ದಾರೆ. ಯುವ ಕ್ರಿಕೆಟಿಗರು ಅವರಿಂದ ಕಲಿಯುವುದು ಸಾಕಷ್ಟಿದೆ. ನಾನು ವೈಯಕ್ತಿಕವಾಗಿ ಹೇಳುವುದಾದರೆ ಧವನ್ ಅವರೇ ನಾಯಕತ್ವಕ್ಕೆ ಸೂಕ್ತವಾದ ವ್ಯಕ್ತಿ ಎಂದು ದೀಪಕ್ ಚಹರ್ ಹೇಳಿದ್ದಾರೆ.
14ನೇ ಐಪಿಎಲ್ನಲ್ಲಿ ಉತ್ತಮ ಲಯದಲ್ಲಿದ್ದೆ, ಶ್ರೀಲಂಕಾ ಪ್ರವಾಸದಲ್ಲಿ ಆಡಲು ಸನ್ನದ್ಧವಾಗಿದ್ದೇನೆ ಎಂದು ಚಹರ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಏಕದಿನ ಹಾಗೂ ಟಿ20 ಎರಡೂ ಸರಣಿಗಳನ್ನು ಜಯಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಜುಲೈನಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಲಿದೆ. ಟೂರ್ನಿಯ ವೇಳಾಪಟ್ಟಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.