ಡಾ. ವಿಜಯ ಸಂಕೇಶ್ವರ ಅವರೇ ನನಗೆ ಸ್ಫೂರ್ತಿ: ಶರಣ್​

Vijayananda 9
Published on

ಬೆಂಗಳೂರು: 'ನಾನು ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡಿದವನು. ಡಾ. ವಿಜಯ ಸಂಕೇಶ್ವರ ಅವರನ್ನು ನೋಡಿ ಬೆಳೆದವನು. ಈಗ ಅವರನ್ನು ಒಬ್ಬ ಪುಟ್ಟ ಅಭಿಮಾನಿಯಾಗಿ ನೋಡುವ ಅವಕಾಶ ಸಿಕ್ಕಿದೆ. ನಮ್ಮ ಬಹಳಷ್ಟು ಬೀಳುಗಳಲ್ಲಿ ಅವರು ನಮಗೆ ಸ್ಫೂರ್ತಿ ತುಂಬಿದ್ದಾರೆ. ಇವತ್ತು ನಾನು ಇಲ್ಲಿಯವರೆಗೂ ಬಂದಿದ್ದೇನೆ ಎಂದರೆ ಅವರ ಆಶೀರ್ವಾದ ಮತ್ತು ಸ್ಫೂರ್ತಿಯೇ ಕಾರಣ' ಎಂದು ನಟ ಶರಣ್​ ಹೇಳಿದ್ದಾರೆ.

ಇಂದು ಒರಾಯನ್​ ಮಾಲ್​ನ ಲೇಕ್ ವ್ಯೂನಲ್ಲಿ 'ವಿಜಯಾನಂದ' ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು ಮಾತನಾಡಿದ ಅವರು, 'ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಇಂತಹ ಸಿನಿಮಾದ ಆಡಿಯೋ ಲಾಂಚ್ ಆಗುತ್ತಿರುವುದು ಖುಷಿ ತಂದಿದೆ. ಇದಕ್ಕಿಂತ ಕನ್ನಡರಿಗರಿಗೆ ಸಂತೋಷದ ವಿಷಯ ಏನಿದೆ? ಈ ಹಾಡಿನ ಹಾಡಿನ ಐದು ಶಾಟ್ಸ್ ವರೆಗೆ ನಿಹಾಲ್ ಕಾಣಿಸಿದರು. ಆರನೇ ಶಾಟ್​ನಲ್ಲಿ ನನಗೆ ವಿಜಯ ಸಂಕೇಶ್ವರ ಅವರು ಕಾಣಿಸಿದರು. ಬಹಳ ಹೋಂವರ್ಕ್​​ ಮಾಡಿ ಈ ಪಾತ್ರ ಮಾಡಿದ್ದಾರೆ' ಎಂದು ಹೇಳಿದರು.

'ಇದು ಕನ್ನಡದ ಮೊದಲ ಬಯೋಪಿಕ್​. ಒಬ್ಬ ಕಲಾವಿದನಾಗಿ ಬಹಳ ಹೆಮ್ಮೆಯಾಗುತ್ತಿದೆ. ನಾನು ಕೆಲವು ಬಯೋಪಿಕ್​ಗಳನ್ನು ನೋಡಿದ್ದೇನೆ. ಬಯೋಪಿಕ್​ ಮಾಡಿದ ವ್ಯಕ್ತಿಯೇ ಮುಂದೆ ನಿಂತು ಮಾಡುತ್ತಿರುವುದನ್ನು ನೋಡಿದ್ದು ಇದೇ ಮೊದಲು. ಈ ತರಹದ ಚಿತ್ರ ಸಿಗುವುದು ಸೌಭಾಗ್ಯ. ಜೀವನದಲ್ಲಿ ಒಂದೇ ಸಲ ಸಿಗುವುದು. ಅದು ನಿಹಾಲ್​ ಅವರಿಗೆ ಸಿಕ್ಕಿದೆ. ಇದು ಬಹಳ ಖುಷಿಯ ವಿಷಯ. ಇದು ಬರೀ ಖುಷಿಯಷ್ಟೇ ಅಲ್ಲ. ದೊಡ್ಡ ಜವಾಬ್ದಾರಿ. ಒಬ್ಬ ಜೀವಂತ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುವುದು ಎಷ್ಟು ಜವಾಬ್ದಾರಿಯುತ ಕೆಲಸ ಎಂದು ನನಗೆ ಗೊತ್ತು. ಈ ಚಿತ್ರದ ಮೂಲಕ ವಿಜಯ ಸಂಕೇಶ್ವರ ಅವರು ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ವಿ.ಆರ್.ಎಲ್ ಸಂಸ್ಥೆಯು ಸಿನಿಮಾ ರಂಗದಲ್ಲಿಯೂ ಉತ್ತಮ ಮಟ್ಟದಲ್ಲಿ ಬೆಳೆಯಲಿ' ಎಂದು ಶರಣ್​ ಹಾರೈಸಿದರು.

ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್​ ಆದ 'ವಿಜಯಾನಂದ' ಚಿತ್ರವು ಡಿಸೆಂಬರ್​ 09ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ನ.19ರಂದು ಚಿತ್ರದ ಟ್ರೇಲರ್​ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net