

ಬೆಂಗಳೂರು: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್ ಆದ 'ವಿಜಯಾನಂದ' ಚಿತ್ರವು ಡಿಸೆಂಬರ್ 9ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ನ.19ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿಜಯ ಸಂಕೇಶ್ವರ ಅವರು ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವುದರ ಜತೆಗೆ, ಈ ಚಿತ್ರವು ಯುವಕರಲ್ಲಿ ಸ್ಫೂರ್ತಿ ತುಂಬಿದರೆ ಮತ್ತು ಹೆಚ್ಚು ಜನ ನೋಡಿ ತಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ, ನಮ್ಮ ಶ್ರಮ ಸಾರ್ಥಕವಾದಂತೆ ಎಂದು ಹೇಳಿದರು.
ಇದುವರೆಗೂ ಬೇರೆ ಭಾಷೆಗಳಲ್ಲಿ ಕನ್ನಡದವರ ಕುರಿತು ಕೆಲವು ಬಯೋಪಿಕ್ಗಳು ಬಂದಿದ್ದರೂ ಕನ್ನಡದಲ್ಲಿ ಇದು ಮೊದಲ ಪ್ರಯತ್ನ ಎಂದ ಅವರು, 'ಕನ್ನಡದಲ್ಲಿ ಇಂಥದ್ದೊಂದು ಪ್ರಯತ್ನ ಇದೇ ಮೊದಲು ಎಂಬ ಖುಷಿ ಇದೆ. ಬೇರೆ ಬಯೋಪಿಕ್ಗಳಲ್ಲಿ ನೈಜ ಘಟನೆಗಳ ಜತೆಗೆ ಒಂದಿಷ್ಟು ಸಿನಿಮೀಯ ದೃಶ್ಯಗಳನ್ನು ಸಹ ಕಾಣಬಹುದು. ಆದರೆ, ಇಲ್ಲಿ ನೈಜ ಘಟನೆಗಳನ್ನಷ್ಟೇ ತೋರಿಸಬೇಕು ಎಂಬುದನ್ನು ನಿರ್ದೇಶಕಿ ರಿಷಿಕಾ ಶರ್ಮ ಅವರಿಗೆ ಮೊದಲೇ ಸ್ಪಷ್ಟಪಡಿಸಿದ್ದೆ. ಅದರಂತೆ ಅವರು ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ' ಎಂದು ಹೇಳಿದರು.
'ನಾನು ಚಿಕ್ಕವನಿದ್ದಾಗ ಹೇಗಿದ್ದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಉದ್ದ ಮೀಸೆ ಬಿಟ್ಟಿದ್ದೆ. ಕಲರ್ ಶರ್ಟ್ ತೊಡುತ್ತಿದ್ದೆ. ಬಹಳ ಜೋಶ್ ಇತ್ತು. ಪರಿಶ್ರಮ ಹಾಕುವುದಕ್ಕೆ ಹಿಂದೇಟು ಹಾಕುತ್ತಿರಲಿಲ್ಲ. ಬೆಳಿಗ್ಗೆ ಬೇಗ ಎದ್ದು ಹೋದರೆ, ಮನೆಗೆ ವಾಪಸ್ಸಾಗುತ್ತಿದ್ದುದು ಮಧ್ಯರಾತ್ರಿಗೆ. ಪಕ್ಕದಮನೆಯವರು ನನ್ನ ಹೆಂಡತಿ ಬಳಿ ನಾನು ಸ್ಮಗ್ಲಿಂಗ್ ಮಾಡುತ್ತೀನಾ ಎಂದು ಕೇಳಿದ್ದರಂತೆ' ಎಂದರು.