ವಿಮಾನದಲ್ಲಿ ಬಂದು ರೈಲಲ್ಲಿ ಹೋಗುತ್ತಿದ್ದ ಸರಗಳ್ಳರು; ಶ್ಯಾಮಿಲಿ ಗ್ಯಾಂಗ್​​ನ ಇಬ್ಬರ ಬಂಧನ

Shamili
ಶ್ಯಾಮಿಲಿ ಗ್ಯಾಂಗ್ ಸದಸ್ಯರಿಬ್ಬರಿಂದ ವಶಪಡಿಸಿಕೊಂಡ ಚಿನ್ನಾಭರಣಗಳೊಂದಿಗೆ ಪೊಲೀಸ್​ ಅಧಿಕಾರಿ-ಸಿಬ್ಬಂದಿ ವರ್ಗ.
Published on

ಬೆಂಗಳೂರು: ಪಂಜಾಬ್‌ನ ಲೂಧಿಯಾನದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು 11ಕ್ಕೂ ಹೆಚ್ಚು ಸರಗಳ್ಳತನ ಮಾಡಿದ್ದ ಉತ್ತರ ಭಾರತ ಮೂಲದ ಶ್ಯಾಮಿಲಿ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಲೂಧಿಯಾನ ಮೂಲದ ಅರ್ಜುನ್ ಕುಮಾರ್ ಹಾಗೂ ರಾಕೇಶ್ ಬಂಧಿತರು. ಆರೋಪಿಗಳಿಂದ 450 ಗ್ರಾಂ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಸುಭಾಷ್ ಕುಮಾರ್, ಸಂಜಯ್, ಚಗಲ್ಲಾಲ್ ಹಾಗೂ ಸೋನುಕುಮಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬಂಧಿತರು ಬೈಕ್‌ವೊಂದನ್ನು ನಗರದಲ್ಲಿ ಕಳ್ಳತನ ಮಾಡಿದ್ದರು. ಕಳೆದ ಜೂನ್ 28 ರಿಂದ 3 ದಿನಗಳ ಕಾಲ ಬೆಂಗಳೂರು ಹೊರವಲಯದ ಸರ್ಜಾಪುರ, ಹೆಬ್ಬಗೋಡಿ, ಹೊಸಕೋಟೆ, ಅನುಗೊಂಡನಹಳ್ಳಿ, ತಿರುಮಲಶೆಟ್ಟಿ, ಸೂಲಿಬೆಲೆ, ದೊಡ್ಡಬಳ್ಳಾಪುರ, ಆವಲಹಳ್ಳಿ, ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ 11 ಕಡೆ ಸರಗಳ್ಳತನ ಮಾಡಿದ್ದರು. ಒಂಟಿ ಮಹಿಳೆ, ವೃದ್ಧೆಯರನ್ನು ಗುರಿಯಾಗಿಸಿ ವಿಳಾಸ ಕೇಳುವ ನೆಪದಲ್ಲಿ, ನೀರು ಕೇಳುವ ಹಾಗೂ ಅಂಗಡಿಗಳಲ್ಲಿ ವಸ್ತು ಖರೀದಿಸುವ ಸೋಗಿನಲ್ಲಿ ಸರಗಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.

ಈ ಸಂಬಂಧ ಗ್ರಾಮಾಂತರ ವಿಭಾಗದ ಎಸ್‌ಪಿ ಕೋನ ವಂಶಿಕೃಷ್ಣ, ಹೊಸಕೋಟೆ ಉಪವಿಭಾಗದ ಡಿವೈಎಸ್ಪಿ ಎಚ್.ಎಂ. ಉಮಾಶಂಕರ್ ಹಾಗೂ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‌ಪಿ ರಂಗಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ.

ವಿಮಾನದಲ್ಲಿ ಬರುತ್ತಿದ್ದ ಆರೋಪಿಗಳು

ಬಂಧಿತ ಆರೋಪಿಗಳು ಊರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿಗೆ ಇಳಿದಿದ್ದರು. ಲೂಧಿಯಾನದಿಂದ ದೆಹಲಿಗೆ ಬಸ್‌ನಲ್ಲಿ ಹೋಗಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಸ್ಥಳೀಯ ಕ್ಯಾಬ್ ಬಳಸಿ ಸರ್ಜಾಪುರದ ದೊಮ್ಮಸಂದ್ರ ಬಳಿ ಸ್ನೇಹಿತನ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಕದ್ದ ಬೈಕ್‌ಗಳ ಮೂಲಕವೇ ನಗರದ ಹೊರವಲಯಗಳಲ್ಲಿ ಸರಗಳ್ಳತನ ಮಾಡುತ್ತಿದ್ದರು. ಕೃತ್ಯ ಎಸಗಿದ ನಂತರ ರೈಲು, ವಿಮಾನ ನಿಲ್ದಾಣ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಬೈಕ್ ನಿಲ್ಲಿಸುತ್ತಿದ್ದರು. ಕದ್ದ ಚಿನ್ನಾಭರಣದೊಂದಿಗೆ ವಿಮಾನದಲ್ಲಿ ಹೋದರೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬೀಳುವ ಆತಂಕದಿಂದ ರೈಲಿನಲ್ಲೇ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಗೋವಾ, ಬಾಂಬೆ ಸೇರಿ ವಿವಿಧೆಡೆ ಲಾಡ್ಜ್‌ನಲ್ಲಿ ತಂಗಿ ಮೋಜು ಮಸ್ತಿಯಲ್ಲಿ ತೊಡಗಿದ್ದರು.

ಜೈಲಿನಿಂದ ಹೊರ ಬಂದು ಹಳೇ ಚಾಳಿ

2014ರಲ್ಲಿ ತಮಿಳನಾಡಿನ ಸೇಲಂ, ಕೃಷ್ಣಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದರು. 6 ತಿಂಗಳ ಕಾಲ ಜೈಲುವಾಸ ಅನುಭವಿಸಿ ಕಳೆದ ವರ್ಷ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ರಾಜಾಜಿನಗರ, ಕಾಮಾಕ್ಷಿಪಾಳ್ಯ ಸೇರಿ 10ಕ್ಕೂ ಹೆಚ್ಚು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ನಡೆಸಿದ್ದರು. ಮತ್ತೆ ಯಲಹಂಕ ಪೊಲೀಸರಿಂದ ಬಂಧನಕ್ಕೊಳಗಾಗಿ ಕೆಲ ತಿಂಗಳ ಹಿಂದೆ ಜಾಮೀನು ಪಡೆದು ಹೊರಬಂದಿದ್ದರು. ಪ್ರಕರಣವನ್ನು ಬೇಧಿಸಿದ ವಿಶೇಷ ತನಿಖಾ ತಂಡಕ್ಕೆ ಐಜಿಪಿ ಚಂದ್ರಶೇಖರ್ 50 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net