ಹೀಗಿದ್ದೇನಾದ್ರೂ ಕಂಡುಬಂದ್ರೆ ನಂಗೆ ತಿಳಿಸಿ ಅಂದ್ರು ನಟಿ ಆಶಿಕಾ; ಅದಾದ ಕೆಲವು ಹೊತ್ತಲ್ಲೇ ಆ ಪೇಜ್ ಕಾಣೆ!

Untitled-1
Published on

ಬೆಂಗಳೂರು: ಸೆಲೆಬ್ರಿಟಿಗಳ ಹೆಸರಲ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಖಾತೆ ತೆರೆಯುವುದು ಹೊಸದೇನಲ್ಲ. ಅಂಥ ಹಲವು ಖಾತೆಗಳು ಚಾಲ್ತಿಯಲ್ಲಿವೆ. ಆದರೆ ಅವು ಒಂದು ಚೌಕಟ್ಟಿನೊಳಗೆ ಇದ್ದರೆ ಚಂದ, ಅತಿಯಾದರೆ ಅಸಹ್ಯ. ಅಭಿಮಾನಿಗಳ ಹೆಸರಲ್ಲಿ ಅಂಥದ್ದೊಂದು ಅತಿರೇಕ ತೋರಿದ್ದಕ್ಕೆ ನಟಿ ಆಶಿಕಾ ರಂಗನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಟಿ ಆಶಿಕಾ ರಂಗನಾಥ್ ಅವರ ಅಭಿಮಾನಿಗಳು ಎಂದುಕೊಂಡು ಅವರ ಹೆಸರಿನಲ್ಲೇ ಫೇಸ್​ಬುಕ್​ ಪೇಜ್​ ತೆರೆದಿದ್ದ ಕೆಲವರು ಇನ್ನೊಬ್ಬರನ್ನು ಅವಹೇಳನ ಮಾಡುವಂತಹ ಪೋಸ್ಟ್​ಗಳನ್ನು ಹಾಕಿದ್ದರು. ashikaranganathfans123 ಎಂಬ ಯೂಸರ್​ ನೇಮ್​ ಹೊಂದಿರುವ ಫೇಸ್​ಬುಕ್​ ಪೇಜ್​ನಿಂದ ವ್ಯತಿರಿಕ್ತ ಪೋಸ್ಟ್​ ಆಗುತ್ತಿರುವುದನ್ನು ಗಮನಿಸಿದ ಆಶಿಕಾ ಆ ಸಂಬಂಧ ತಕ್ಷಣ ಪ್ರತಿಕ್ರಿಯಿಸಿದ್ದಾರೆ.

ನನ್ನ ಹೆಸರಿನಲ್ಲಿ ಜನರು ಹೀಗೆಲ್ಲ ಸಂವೇದನಾರಹಿತ ಪೋಸ್ಟ್ ಹಾಕುತ್ತಾರೆ ಎಂದು ಅಂದುಕೊಂಡಿರಲಿಲ್ಲ. ನಾನು ನನ್ನ ಅಭಿಮಾನಿಗಳನ್ನು ನಿಜವಾಗಿಯೂ ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಆದರೆ ಬರೀ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಲುವಾಗಿ ಹೀಗೆಲ್ಲ ಮಾಡುವುದು ಸರಿಯಲ್ಲ. ಪರಸ್ಪರ ನೈತಿಕತೆ, ಗೌರವ ಇರಲಿ. ಇಂಥವು ಕಂಡುಬಂದರೆ ನನ್ನ ಗಮನಕ್ಕೆ ತನ್ನಿ ಹಾಗೂ ಈ ಪೇಜನ್ನು ರಿಪೋರ್ಟ್ ಮಾಡಿ ಎಂದು ಆಶಿಕಾ ಸೋಷಿಯಲ್​ ಮೀಡಿಯಾದಲ್ಲಿ ಕೋರಿಕೊಂಡಿದ್ದರು. ಆ ಮೇರೆಗೆ ಹಲವರು ರಿಪೋರ್ಟ್ ಮಾಡಿದ್ದು ಇದೀಗ ಆ ಪೇಜ್​ ಕಾಣಿಸದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net