

| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಡಂಕಿ
ನಿರ್ದೇಶನ: ರಾಜಕುಮಾರ್ ಹಿರಾನಿ
ನಿರ್ಮಾಣ: ಗೌರಿ ಖಾನ್
ತಾರಾಗಣ: ಶಾರುಖ್ ಖಾನ್, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ್ ಕೊಚಾರ್, ಅನಿಲ್ ಗ್ರೋವರ್ ಮುಂತಾದವರು
ರಾಜಕುಮಾರ್ ಹಿರಾನಿ ನಿರ್ದೇಶನದ ‘ಮುನ್ನಭಾಯ್’ ಸರಣಿ, ‘3 ಈಡಿಯಟ್ಸ್’, ‘ಪಿಕೆ’, ‘ಸಂಜು’.. ಹೀಗೆ ಎಲ್ಲ ಚಿತ್ರಗಳೂ ಹಿಟ್ ಎನಿಸಿಕೊಂಡಿವೆ. ಹಾಗೇ ಶಾರುಖ್ ಖಾನ್ ಬಾಲಿವುಡ್‌ನಲ್ಲಿಯೇ ಅತಿಹೆಚ್ಚು ಸಕ್ಸಸ್‌ರೇಟ್ ಹೊಂದಿರುವ ಸೂಪರ್‌ಸ್ಟಾರ್. ಈ ಒಂದು ವರ್ಷದಲ್ಲೇ ‘ಜವಾನ್’, ‘ಪಠಾಣ್’ ಮೂಲಕ ಎರಡು ಬಾರಿ ಸಾವಿರ ಕೋಟಿ ರೂ. ಗಡಿ ದಾಟಿದ್ದ ಅವರು, ‘ಡಂಕಿ’ ಮೂಲಕ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರು. ಇದೇ ಮೊದಲ ಬಾರಿಗೆ ಸ್ಟಾರ್ ನಿರ್ದೇಶಕ ಮತ್ತು ನಟ ಒಂದಾಗಿರುವುದು ಸಿನಿಮಾ ಪಕ್ಕಾ ಸಕ್ಸಸ್ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆ ಮಾತನ್ನು ‘ಡಂಕಿ’ ಉಳಿಸಿಕೊಂಡಿದೆಯಾ?
ಆತ ಹಾರ್ಡಿ (ಶಾರುಖ್) ಭಾರತೀಯ ಸೇನೆಯಲ್ಲಿದ್ದ ಸೈನಿಕ. ಪಂಜಾಬ್‌ನ ಲಾಲ್ಟೂ ಎಂಬ ಗ್ರಾಮಕ್ಕೆ ಬರುತ್ತಾನೆ. ಅಲ್ಲಿ ಆತನಿಗೆ ಮನು (ತಾಪ್ಸೀ), ಸುಖಿ (ವಿಕ್ಕಿ), ಬುಗ್ಗು (ವಿಕ್ರಮ್) ಮತ್ತು ಬಲ್ಲಿ (ಅನಿಲ್) ಸ್ನೇಹಿತರಾಗುತ್ತಾರೆ. ಹಳ್ಳಿಯಲ್ಲಿ ಸರಿಯಾದ ಕೆಲಸ, ಸಂಬಳವಿಲ್ಲದೇ ಬಡವರಾಗಿಯೇ ಇರುವುದಕ್ಕಿಂತ, ಲಂಡನ್‌ಗೆ ಹೋಗಿ ಚೆನ್ನಾಗಿ ದುಡಿದು ಹಣ ಗಳಿಸಿ, ಆರ್ಥಿಕ ಸಮಸ್ಯೆಯಿಂದ ಕುಟುಂಬವನ್ನು ಪಾರು ಮಾಡಬೇಕು ಎಂಬ ಛಲ ಅವರದು. ಆದರೆ, ಬಲ್ಲಿ ಹೊರತುಪಡಿಸಿ ಉಳಿದವರಿಗೆ ಇಂಗ್ಲೆಂಡ್ ವೀಸಾ ಸಿಗುವುದಿಲ್ಲ. ಹೀಗಾಗಿ ಅಕ್ರಮವಾಗಿ ಇಂಗ್ಲೆಂಡ್‌ಗೆ ನುಸುಳಲು ಪ್ಲ್ಯಾನ್ ಮಾಡುತ್ತಾರೆ. ಆ ಪ್ಲ್ಯಾನ್ ವರ್ಕ್ ಆಗುತ್ತಾ? ಇಂಗ್ಲೆಂಡ್‌ಗೆ ಹೋಗುತ್ತಾರಾ? ಮುಂದೇನು? ಎಂಬುದೇ ‘ಡಂಕಿ’.
ನಿರ್ದೇಶಕ ಹಿರಾನಿಯ ಇದುವರೆಗಿನ ದುರ್ಬಲ ಕಥೆ, ಚಿತ್ರಕಥೆ ‘ಡಂಕಿ’. ಮೊದಲರ್ಧ ನಗಿಸುತ್ತಾ ಸಾಗುವ ಕಥೆ ಮಧ್ಯಂತರದ ಬಳಿಕ ಗಂಭೀರ ತಿರುವು ಪಡೆಯುತ್ತದೆ. ಬಳಿಕ ಕ್ಲೈಮ್ಯಾಕ್ಸ್‌ನಲ್ಲಿ ಭಾವುಕರನ್ನಾಗಿಸುತ್ತದೆ. ಆದರೆ, ರಾತ್ರಿಯೆಲ್ಲ ನದಿಯೊಳಗೆ ಕಳೆಯುವ ಸನ್ನಿವೇಶ, ಅಕ್ರಮ ವಲಸೆಯನ್ನು ಸಮರ್ಥಿಸಿಕೊಂಡಿರುವ ರೀತಿ ಹಾಸ್ಯಾಸ್ಪದ. ಒಂದೊಳ್ಳೆ ತಾರಾಗಣ ಹೊಂದಿದ್ದರೂ 161 ನಿಮಿಷಗಳ ಸಿನಿಮಾ ಸುದೀರ್ಘವೆನಿಸುತ್ತದೆ. 1995 ಹಾಗೂ 2020, ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಆದರೆ, 25 ವರ್ಷಗಳ ಬದಲಾವಣೆಯನ್ನು ಪಾತ್ರಗಳಲ್ಲಷ್ಟೇ ಕಾಣಬಹುದು. ಹಿನ್ನೆಲೆಯಲ್ಲಿ ಹೆಚ್ಚು ಭಿನ್ನತೆಯಿಲ್ಲ. ಕೆಲವೇ ಸನ್ನಿವೇಶಗಳಲ್ಲಿ ಬಂದು ಹೋಗುವ ವಿಕ್ಕಿ ಕೌಶಲ್ ‘ಡಂಕಿ’ ಚಿತ್ರದ ನಿಜವಾದ ಹೀರೋ. ತಾಪ್ಸೀ, ಬೊಮನ್ ಇರಾನಿ ನಟನೆ ಇಷ್ಟವಾಗುತ್ತದೆ. ಉಳಿದವರು ಅಚ್ಚುಕಟ್ಟಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರೀತಮ್ ಸಂಗೀತದಲ್ಲಿ ‘ಬಂದಾ’ ಮತ್ತು ‘ಓ ಮಾಹಿ’ ಕೇಳಬಹುದು. ಇನ್ನೂ 20 ನಿಮಿಷಗಳ ಕತ್ತರಿ ಪ್ರಯೋಗವಾಗಿದ್ದರೆ, ಕಥೆಗೆ ಮತ್ತಷ್ಟು ವೇಗ ಸಿಗುತ್ತಿತ್ತು.