ಆ ದಿನ ನಾನು… ರಿಷಭ್ ಪಂತ್ ಅಪಘಾತವನ್ನು ನೆನೆದು ಭಾವುಕರಾದ ಶಾರುಖ್ ಖಾನ್​!

Sharukh Khan
Published on

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರು 2022ರ ಡಿಸೆಂಬರ್ 30 ರಂದು ಕಾರು ಅಪಘಾತಕ್ಕೊಳಗಾದ ಸಂಗತಿ ಎಲ್ಲರಿಗೂ ತಿಳಿದಿದೆ. ಅದೃಷ್ಟವಶಾತ್ ಪಂತ್​ ಅಪಘಾತದಿಂದ ಪಾರಾದರು. ಆದರೆ ಈ ಅಪಘಾತದಲ್ಲಿ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದರಿಂದಾಗಿ ಸುಮಾರು 18 ತಿಂಗಳ ಕಾಲ ಕ್ರಿಕೆಟ್​ನಿಂದ ಪಂತ್ ದೂರ ಉಳಿಯಬೇಕಾಯಿತು.

ಆದರೆ, ಪಂತ್ ಇಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಹಠಕ್ಕೆ ಬಿದ್ದವರಂತೆ ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿ ಚೇತರಿಸಿಕೊಂಡ ಪಂತ್​, ಈ ಬಾರಿಯ ಐಪಿಎಲ್ ಸೀಸನ್​ಗೆ ಎಂಟ್ರಿ ಕೊಡುವುದಷ್ಟೇ ಅಲ್ಲ, ಅದ್ಬುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅಲ್ಲದೆ, ಮುಂಬರುವ ಟಿ20 ವಿಶ್ವಕಪ್​ಗೂ ಪಂತ್​ ಆಯ್ಕೆಯಾಗಿದ್ದಾರೆ. ಇದರ ನಡುವೆ ಇತ್ತೀಚಿಗೆ ಸ್ಟಾರ್ ಸ್ಪೋರ್ಟ್ಸ್​ಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್​ ಬಾದ್​ ಷಾ ಶಾರುಖ್ ಖಾನ್​ ಅವರು ಪಂತ್ ಅಪಘಾತವನ್ನು ನೆನಪಿಸಿಕೊಂಡು ಭಾವುಕರಾದರು.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ 7 ವಿಕೆಟ್​ಗಳ ಜಯ ಸಾಧಿಸಿದ್ದು ಗೊತ್ತೇ ಇದೆ. ಈ ಗೆಲುವಿನ ನಂತರ ಶಾರುಖ್ ಮೈದಾನಕ್ಕೆ ಬಂದು ಎಲ್ಲ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಿಂಗ್ ಖಾನ್ ಶಾರುಖ್ ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್​ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನಕ್ಕೆ ಸಂಬಂಧಿಸಿದ ಪ್ರೋಮೋವನ್ನು ಸ್ಟಾರ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ರಿಷಭ್​ ಪಂತ್ ಅಪಘಾತವನ್ನು ಮೆಲುಕು ಹಾಕಿದ ಶಾರುಖ್ ಭಾವುಕರಾದರು.

ಆ ದಿನ ನಾನು ರಿಷಭ್​ ಪಂತ್ ಅಪಘಾತದ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದೆ. ಅಪಘಾತದ ವಿಡಿಯೋ ನೋಡಿ ಬೆಚ್ಚಿಬಿದ್ದಿದೆ. ಯುವಕರಿಗೆ ಇಂತಹ ಅವಘಡಗಳು ಸಂಭವಿಸುತ್ತಿರುವುದು ತುಂಬಾ ಬೇಸರದ ಸಂಗತಿ. ಆದರೆ, ಪಂತ್​ ಅವರು ಆ ಅಪಘಾತದಿಂದ ಚೇತರಿಸಿಕೊಂಡು ಹಿಂತಿರುಗಿದ ರೀತಿ ಅದ್ಭುತವಾಗಿದೆ. ಅವರು ತಮ್ಮ ಕಾಲಿನ ಶಸ್ತ್ರಚಿಕಿತ್ಸೆಯಿಂದ ಬೇಗನೆ ಚೇತರಿಸಿಕೊಂಡರು. ಅವರ ಭವಿಷ್ಯ ಅದ್ಬುತವಾಗಿರಲಿ ಎಂದು ನಾನು ಬಯಸುತ್ತೇನೆ ಎಂದು ಶಾರುಖ್​ ಭಾವುಕರಾಗಿ ನುಡಿದರು. ಇದೇ ಶುಕ್ರವಾರ (ಮೇ 1) ಈ ಸಂದರ್ಶನದ ಭಾಗ 1ರ ಸಂಪೂರ್ಣ ಸಂಚಿಕೆ ಪ್ರಸಾರವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net