More

    ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್​ ಎಲ್ಲಿಗೆ ಬಂತು? ಯಾರು ಏನಂದ್ರು? ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಇದೀಗ ರಾಷ್ಟ್ರಮಟ್ಟದಲ್ಲಿ ಬಹಳ ಸದ್ದು ಮಾಡುತ್ತಿದೆ. ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿವೆ. ಇದರಿಂದಾಗಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಕುಟುಂಬ ಮುಜುಗರಕ್ಕೀಡಾಗಿದೆ. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ರಜ್ವಲ್​ರನ್ನು ಜೆಡಿಎಸ್​ ಪಕ್ಷದಿಂದಲೇ ಅಮಾನತು ಮಾಡಲಾಗಿದೆ. ಇದರ ನಡುವೆ ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್​ಐಟಿ) ಚುರುಕುಗೊಳಿಸಿದೆ. ಈ ಪ್ರಕರಣದ ಸದ್ಯದ ಬೆಳವಣಿಗೆಯ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

    ಎಸ್‌ಐಟಿಗೆ 18 ಅಧಿಕಾರಿಗಳ ತಂಡ
    ಪ್ರಸ್ತುತ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಜೆಡಿಎಸ್​-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಪ್ರಜ್ವಲ್​ ಮತ್ತೆ ಕಣಕ್ಕಿಳಿದಿರುವುದರಿಂದ ಪೆನ್​ ಡ್ರೈವ್​ ಪ್ರಕರಣ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರ ಟ್ರೆಂಡಿಂಗ್​ನಲ್ಲಿದೆ. ಪ್ರಜ್ವಲ್​ರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಈಗಾಗಲೇ ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್​ಐಟಿ ರಚನೆ ಮಾಡಿದೆ. ಈ ತನಿಖಾ ತಂಡಕ್ಕೆ 18 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪೊಲೀಸ್ ಇಲಾಖೆ ಇಂದು ನಿಯೋಜಿಸಿ ಆದೇಶಿಸಿದ್ದು, ತನಿಖೆ ಆರಂಭವಾಗಿದೆ. ಪ್ರಕರಣ ಸಂಬಂಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸರು ಒಳಗೊಂಡಂತೆ 18 ಮಂದಿ ಪರಿಣಿತರನ್ನು ಎಸ್​ಐಟಿಗೆ ನಿಯೋಜಿಸಲಾಗಿದೆ.

    ಮಾಜಿ ಕಾರು ಚಾಲಕನ ಸ್ಫೋಟಕ ಹೇಳಿಕೆ
    ಈ ಹಿಂದೆ ಪ್ರಜ್ವಲ್​ ಕಾರು ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಗೌಡ ಅಜ್ಞಾತ ಸ್ಥಳದಲ್ಲಿ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ಕುಟುಂಬದ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೀನಿ. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದೀನಿ. ನನ್ನ ಜಮೀನು ಬರೆಸಿಕೊಂಡು, ನನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದರು. ಅಲ್ಲದೆ, ತುಂಬಾ ಹಿಂಸೆ ನೀಡಿದರು. ಹೀಗಾಗಿ ಅವರ ಮನೆಯಿಂದ ಹೊರಬಂದೆ. ಬಿಜೆಪಿ ಮುಖಂಡ ದೇವರಾಜೇಗೌಡ ಅವರು ರೇವಣ್ಣ ಅವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಹೀಗಾಗಿ ನನಗೆ ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡರ ಬಳಿ ಹೋದೆ. ಇದೇ ಸಂದರ್ಭದಲ್ಲಿ ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ದ ಪ್ರಜ್ವಲ್‌ ರೇವಣ್ಣ ಸ್ಟೇ ತಂದರು. ನಿನ್ನ ಬಳಿಯಿರುವ ವಿಡಿಯೋ, ಫೋಟೋಗಳನ್ನು ಯಾರಿಗೂ ತೋರಿಸಲ್ಲ ಕೊಡು ಎಂದು ದೇವರಾಜೇಗೌಡ ಕೇಳಿದರು. ನಾನು ಅವರನ್ನು ನಂಬಿ, ನನ್ನ ಬಳಿಯಿದ್ದ ವಿಡಿಯೋದ ಒಂದು ಕಾಪಿಯನ್ನು ಕೊಟ್ಟೆ. ಅವರು ಅದನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿರುವುದು ಗೊತ್ತಿಲ್ಲ. ದೇವರಾಜೇಗೌಡರನ್ನು ಬಿಟ್ಟರೆ ನಾನು ಯಾರಿಗೂ ಕೊಟ್ಟಿಲ್ಲ. ಪೆನ್‌ಡ್ರೈವ್ ಅನ್ನು ಯಾರು ಹಂಚಿದರು ಎಂಬುದು ನನಗೆ ತಿಳಿದಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದೆ? ಈ ಬಗ್ಗೆ ಮಾಧ್ಯಮಗಳ ಮುಂದೆ ವಿವರವಾಗಿ ಹೇಳುತ್ತೇನೆ. ಅಲ್ಲದೆ, ಎಸ್​ಐಟಿ ಮುಂದೆ ಹಾಜರಾಗುತ್ತೇನೆ ಎಂದು ಕಾರು ಚಾಲಕ ಕಾರ್ತಿಕ್​ ಗೌಡ ತಿಳಿಸಿದ್ದಾರೆ.

    ರಾಷ್ಟ್ರೀಯ ಮಹಿಳಾ ಆಯೋಗದಿಂದಲೂ ದೂರು
    ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಡಿಜಿಪಿಗೆ ಪತ್ರ ಬರೆದಿದ್ದು, ತನಿಖೆಯ ಪ್ರಗತಿ ಹಾಗೂ ಇದಕ್ಕೆ ಪೂರಕವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮೂರು‌ ದಿನಗಳಲ್ಲಿ ವರದಿ ನೀಡಬೇಕೆಂದು ತಿಳಿಸಿದೆ.

    ಪ್ರಜ್ವಲ್ ರೇವಣ್ಣ ಅಮಾನತು
    ಸಂಸದ‌ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೆಗೌಡರು ತಕ್ಷಣ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತ್ತು ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್​​ ವಿರುದ್ಧ ಆರೋಪ ಬಂದಿರುವುದರಿಂದ ಹಿನ್ನೆಲೆ ಅಮಾನತ್ತು ಮಾಡಲಾಗಿದೆ. ರಾಜ್ಯ ಸರ್ಕಾರ ರಚಿಸಿರುವ ಎಸ್​ಐಟಿ ತನಿಖೆಯಿಂದ ಪ್ರಜ್ವಲ ತಪ್ಪಿತಸ್ಥ ಎಂದು ಸಾಬೀತಾದರೆ ಅವರನ್ಜು ಶಾಶ್ವತವಾಗಿ ಅಮಾನತ್ತು ಮಾಡಲಾಗುವುದು ಎಂದರು.

    ಪೆನ್​ಡ್ರೈವ್ ಹಂಚಿದ ಮಹಾನ್ ನಾಯಕ ಯಾರು?
    ಸಂಸದ ಪ್ರಜ್ವಲ ರೇವಣ್ಣ ಪ್ರಕರಣದಿಂದ ನಾವು ಪಲಾಯನ ಮಾಡುವುದಿಲ್ಲ. ಪ್ರಕರಣದ ತನಿಖೆ ನಡೆಸುವುದರ ಜತೆಗೆ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಂಚಿದ ಮಹಾನ್ ನಾಯಕ ಯಾರು ಎಂಬುದರ ಬಗ್ಗೆಯೂ ತನಿಖೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆಗ್ರಹಿಸಿದರು. ಮಂಗಳವಾರ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕೋರ ಕಮಿಟಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪ್ರಜ್ವಲ ರೇವಣ್ಣ ಆರೋಪಿ ಸ್ಥಾನದಲ್ಲಿ ಇದ್ದಾರೆ. ಇದರಲ್ಲಿ ಸತ್ಯಾಸತ್ಯತೆ ಹೊರಬರುವುದು ಒಂದು ಭಾಗವಾದರೆ, ಯಾವ ಕಾರಣಕ್ಕಾಗಿ ಪೆನ್ ಡ್ರೈವ್ ಹಂಚಿದರು ಎಂಬುದು ರಾಜ್ಯದ ಜನತೆಗೆ ತಿಳಿಯಬೇಕಿದೆ ಎಂದರು.

    40 ಜಿಬಿ ಪೆನ್​ಡ್ರೈವ್​ಗಳು ಎಸ್​ಐಟಿ ವಶಕ್ಕೆ
    ಸಿಎಂ ಸಿದ್ದರಾಮಯ್ಯ ನಿರ್ದೇಶಿಸಿದಂತೆ ಈ ಪ್ರಕರಣವನ್ನು ವಿಶೇಷ ತನಿಖಾ ದಳ (SIT) ಕೈಗೆತ್ತಿಕೊಂಡು, ಚುರುಕಿನ ತನಿಖೆ ಆರಂಭಿಸಿದೆ. ಈಗಾಗಲೇ ಮೂರು ಪ್ರತ್ಯೇಕ ತಂಡ ರಚಿಸಿರುವ ಎಸ್​ಐಟಿ, ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದೆ. ಲೈಂಗಿಕ ದೌರ್ಜನ್ಯ ವಿಡಿಯೋಗಳು ಹಾಗೂ ಪೆನ್​ಡ್ರೈವ್ ಬಗ್ಗೆ ಮಾಹಿತಿ ಕಲೆಹಾಕಿರುವ ಎಸ್​ಐಟಿ 40 ಜಿಬಿ ಪೆನ್​ಡ್ರೈವ್ ಅನ್ನು ವಶಪಡಿಸಿಕೊಂಡಿದೆ. 32 ಜಿಬಿ ಹಾಗೂ 8 ಜಿಬಿಯ ಪೆನ್​ಡ್ರೈವ್‍ಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.

    ಎಸ್‌ಐಟಿ ತನಿಖೆಯಿಂದಲೇ ಸತ್ಯ ಹೊರಬರಲಿ
    ಪ್ರಜ್ವಲ್​ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಅವರ ಹೇಳಿಕೆ ಬಿಡುಗಡೆ ಆಗುತ್ತಿದ್ದಂತೆ ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ನಾನೊಬ್ಬ ಬಿಜೆಪಿ ಮುಖಂಡ ಅನ್ನೋದಕ್ಕಿಂತ ನಾನು ವಕೀಲ. ನನ್ನ ಕಕ್ಷಿದಾರ ಅವರು. ವಕೀಲರಿಗೆ ಏನು ಕೊಡಬೇಕೋ ಅದನ್ನು ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ. ನನ್ನ ಹತ್ತಿರ ಬರುವುದಕ್ಕೂ ಮುಂಚೆಯೇ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನವಾಣೆ ಮಾಡಿದ್ದೇನೆ ಎಂದು ಕಾರ್ತಿಕ್‌ ಹೇಳಿದ್ದ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇನೆ, ನನ್ನ ಜತೆ ಪುಟ್ಟರಾಜು ಎಂಬ ಮತ್ತೊಬ್ಬರಿದ್ದಾರೆ. ನಾವೆಲ್ಲರೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗಿದ್ದೇವು ಎಂದಿದ್ದರು. ಇದಾದ ಮೇಲೆ ರಾಜ್ಯ ಬಿಜೆಪಿ, ಕೇಂದ್ರ ನಾಯಕರಿಗೆ ನಾನು ಪತ್ರ ಬರೆದಿದ್ದೇನೆ ಎಂದು ದೇವರಾಜೇಗೌಡ ತಿಳಿಸಿದ್ದಾರೆ. ಇನ್ನು ವಕೀಲನಾಗಿ ಕಕ್ಷಿದಾರನ ಬಳಿ ನಾನು ಸಾಕ್ಷಿ ಕೇಳಿದ್ದಾನೆ. ಕಾಂಗ್ರೆಸ್‌ನವರ ಬಳಿ ಆತ ಹೋಗಿದ್ದಾನೆ. ನಾನು ಚುನಾವಣೆಯಲ್ಲಿ ನಿಂತಾಗ ಪೆನ್‌ಡ್ರೈವ್ ಬಳಸಿಕೊಳ್ಳಬಹುದಿತ್ತು. ಇದೀಗ ಎಸ್‌ಐಟಿ ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ. ನನ್ನಿಂದ ಯಾರಿಗೆ ಪೆನ್‌ಡ್ರೈವ್ ಹೋಗಿದೆ ಅನ್ನೋ ಸತ್ಯ ಹೊರ ಬರಲಿ ಎಂದು ದೇವರಾಜೇಗೌಡ ಹೇಳಿದ್ದಾರೆ.

    ವಿಡಿಯೋ ಬಗ್ಗೆ ರೇವಣ್ಣ ಒಪ್ಪಿಕೊಂಡಿದ್ದಾರೆ
    ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಡಿ.ಕೆ. ಶಿವಕುಮಾರ್​, ನನ್ನ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ನಾನು ಈ ರೀತಿಯ ಚಿಲ್ಲರೆ ಕೆಲಸ ಮಾಡಲ್ಲ, ಪೆನ್ ಡ್ರೈವ್ ಇದೆ ಎಂದು ಹೆದರಿಸಲ್ಲ. ನಾವು ಚುನಾವಣೆಯನ್ನು ಎದುರಿಸುತ್ತೇವೆ. ನೇರವಾಗಿ ಅಸಂಬ್ಲಿಯಲ್ಲಿ ಚರ್ಚೆ ಮಾಡುತ್ತೇವೆ. ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನ ಭಗವಂತನೂ ಕ್ಷಮಿಸಲ್ಲ. ಕುಮಾರಸ್ವಾಮಿ ಅವರಿಗೆ ನನ್ನನ್ನು ನೆನಪಿಸಿಕೊಂಡಿಲ್ಲ ಅಂದ್ರೆ ನಿದ್ರೆ ಬರಲ್ಲ. ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರ ಏನು ಆಗಬೇಕೋ, ಅದು ಆಗುತ್ತದೆ. ಹಾಗೆಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಅವರ ಜತೆಗೆ ಇದ್ದವರು ಯಾರು? ಯಾರು ಯಾರಿಗೆ ಕರೆ ಮಾಡಿದರು ಅನ್ನೋದನ್ನ ಅವರನ್ನೇ ಕೇಳಬೇಕು. ಇದು ಹಳೇ ವಿಡಿಯೋ ಎಂದು ಎಚ್ ಡಿ ರೇವಣ್ಣ ಹೇಳಿದ್ದಾರೆ. ಅಂದರೆ ಪ್ರಜ್ವಲ್ ವಿಡಿಯೋ ಬಗ್ಗೆ ರೇವಣ್ಣ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಗುಸುಗುಸು ಚರ್ಚೆಯಾಗಿದ್ದು, ಈಗ ಬಹಿರಂಗವಾಗಿದೆ. ಬಿಜೆಪಿಯವರು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ ಎಂದರು.

    ಅಂದಹಾಗೆ ಜೆಡಿಎಸ್​ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದ ಸಂಸದರಾಗಿದ್ದಾರೆ. ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಾಸನ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಏಪ್ರಿಲ್​ 26ರಂದು ಮತದಾನವೂ ನಡೆದಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಹ ಹೊರಬಂದಿವೆ. ಈ ಪ್ರಕರಣ ಇದೀಗ ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದೆ. ಮಹಿಳೆರಿಗೆ ಬೆದರಿಕೆ, ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋ ಮಾಡಿರುವ ಆರೋಪದ ಮೇಲೆ ಪ್ರಜ್ವಲ್​ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್​ಐಟಿಗೆ ವಹಿಸಿದೆ. ಇದರ ನಡುವೆ ಪ್ರಜ್ವಲ್ ಅವರು ಜರ್ಮನಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಪ್ರಜ್ವಲ್​​ ರೇವಣ್ಣ ಕೇಸ್​: ಬಿಜೆಪಿ ಹೊಣೆ ಹೊರಬೇಕೆಂದು ಒತ್ತಾಯಿಸುವುದು ಹಾಸ್ಯಾಸ್ಪದ ಎಂದ ನಟ ಚೇತನ್

    ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿಲ್ಲ! ಬದಲಿಗೆ ಹಾರು ಅಂತ ಹಾರಿಸಿದ್ದಾರೆ: ತೇಜಸ್ವಿನಿ ರಮೇಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts