More

    ಪಕ್ಷಾಂತರಿಗೆ ಪಾಠ ಕಲಿಸಲು ಪಕ್ಷೇತರನಾಗಿ ಸ್ಪರ್ಧೆ

    ಚಿಕ್ಕಮಗಳೂರು: ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ ಹೀಗಾಗಿ ಈ ಅಭ್ಯರ್ಥಿಗೆ ಪಾಠ ಕಲಿಸುವ ಉದ್ದೇಶದಿಂದ ಪಕ್ಷೇತರನಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್ ತಿಳಿಸಿದರು.

    ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 15 ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದು ಮಾಹಿತಿ ನೀಡಿದರು.
    ಕಳೆದ ಬಾರಿಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾನು ಕಾಂಗ್ರೆಸ್ ಇತಿಹಾಸದಲ್ಲಿ ಯಾರು ತೆಗೆದುಕೊಳ್ಳದಷ್ಟು ಮತ ತೆಗೆದುಕೊಂಡು ಕೆಲವೇ ಮತಗಳ ಅಂತರದಿಂದ ಸೋತಿದ್ದೆ. ಆದರೆ ಈ ಬಾರಿ ನನಗೆ ಟಿಕೆಟ್ ನೀಡದೆ ಪಕ್ಷಾಂತರಿ ಓರ್ವರಿಗೆ ಟಿಕೆಟ್ ನೀಡಲಾಗಿದೆ ಎಂದು ಆಯನೂರು ಮಂಜುನಾಥ್ ಅವರ ಹೆಸರನ್ನು ಹೇಳದೆ ತರಾಟೆಗೆ ತೆಗೆದುಕೊಂಡರು.
    ಕ್ಷೇತ್ರ ವ್ಯಾಪ್ತಿಯ ಎಲ್ಲಾ ಶಾಸಕರು ಹಾಗೂ ಮಾಜಿ ಶಾಸಕರು ಈ ಬಾರಿಯೂ ನನಗೆ ಟಿಕೆಟ್ ನೀಡುವಂತೆ ಶಿಫಾರಸ್ಸು ಪತ್ರ ನೀಡಿದ್ದರು. ಆದರೂ ತಮ್ಮನ್ನು ನಿರ್ಲಕ್ಷಿಸಲಾಗಿದೆ. ಹೀಗಾಗಿ ನಾನು ಅನಿವಾರ್ಯವಾಗಿ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
    ನೈಋತ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ 85 ಸಾವಿರ ಮತಗಳಿವೆ. ಶಿವಮೊಗ್ಗ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 45 ಸಾವಿರ ಮತಗಳಿವೆ. ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಒಟ್ಟು 34 ಸಾವಿರ ಮತಗಳಿವೆ. ಶಿವಮೊಗ್ಗ ನಗರದಲ್ಲಿಯೇ ಹೆಚ್ಚಿನ ಮತಗಳಿದ್ದು, ಎಲ್ಲರೂ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
    ಶಿವಮೊಗ್ಗ ಪದವೀಧರ ಸಹಕಾರ ಸಂಘದ ಅಧ್ಯಕ್ಷನಾಗಿ, ಕುವೆಂಪು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯನಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಸಾವಿರಾರು ಜನರನ್ನು ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ನೋಂದಾವಣೆ ಮಾಡಿಸಿದ್ದೇನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಿಜಿ ಸೆಂಟರ್ ತೆರೆಯಲು ನಾನು ಸೆನೆಟ್ ಸದಸ್ಯನಾಗಿದ್ದಾಗಲೇ ಜಾಗ ಗುರುತಿಸಿದ್ದೇವೆ. ಈ ಎಲ್ಲಾ ಅಂಶಗಳು ನನ್ನ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕರಾದ ಡಾ. ಚಂದ್ರಶೇಖರ್, ಡಾ. ಉಮೇಶ್ ಅಂಗಡಿ, ಪೂರ್ಣೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts