More

  ಸಪ್ತ ಸಹೋದರಿಯರಲ್ಲಿ ಮಣಿಪುರದಲ್ಲೇಕೆ ರಕ್ತಕಣ್ಣೀರು?

  ಹಿಂಸಾಚಾರದ ಜ್ವಾಲಾಗ್ನಿಯಿಂದ ಮಣಿಪುರ ನಲುಗಿಹೋಗಿದೆ. 2023ರ ಮೇ 3 ಮತ್ತು 4ರಂದು ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಆರಂಭವಾದ ಸಂಘರ್ಷ ಒಂದು ವರ್ಷದ ಬಳಿಕವೂ ತಣ್ಣಗಾಗಿಲ್ಲ. ಈ ಅವಧಿಯಲ್ಲಿ 219 ಜನರು ಪ್ರಾಣ ಕಳೆದುಕೊಂಡಿದ್ದು, ನೂರಾರು ಜನರು ಗಾಯಗಳನ್ನು ಅನುಭವಿಸಿದ್ದಾರೆ. 1 ಲಕ್ಷಕ್ಕೂ ಅಧಿಕ ಜನರು ಮನೆಬಿಟ್ಟು ಸುರಕ್ಷಿತ ಸ್ಥಳಗಳನ್ನು ಅರಸಿ, ಬೇರೆಡೆ ವಲಸೆ ಹೋಗಿದ್ದಾರೆ. ಅಷ್ಟೇ ಅಲ್ಲ, ಹಿಂಸಾಚಾರದ ಪರಿಣಾಮ ರಾಜ್ಯಕ್ಕೆ 800 ಕೋಟಿ ರೂಪಾಯಿಗೂ ಅಧಿಕ ಆದಾಯ ನಷ್ಟವಾಗಿದೆ. ‘ಮಣಿಪುರದಲ್ಲಿ ಶಾಂತಿಸ್ಥಾಪನೆಗಾಗಿ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಹೊಸ ಸರ್ಕಾರಕ್ಕೆ ಸಲಹೆ ನೀಡಿದ್ದು, ಸರ್ಕಾರದ ಮುಂದಿನ ಕ್ರಮ ಕುತೂಹಲ ಮೂಡಿಸಿದೆ.

  | ರವೀಂದ್ರ ಎಸ್. ದೇಶಮುಖ್

  ಹಿಂಸೆ ಮತ್ತು ಅಶಾಂತಿ ಎಂದಿಗೂ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವುದಿಲ್ಲ ಎಂಬ ವಾಸ್ತವ ಮಣಿಪುರಿಗಳಿಗೆ ಅರ್ಥವಾಗುತ್ತಿಲ್ಲ. ತಮ್ಮ ಹಕ್ಕನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಮಣಿಪುರದ ವರ್ತಮಾನ ಕರಾಳವಾಗಿದೆ. ಕಳೆದೊಂದು ವರ್ಷದಲ್ಲಿ ಈ ರಾಜ್ಯದಲ್ಲಿ ನಡೆದಿರುವ ದುರದೃಷ್ಟಕರ ಘಟನೆಗಳಿಂದ ದೇಶವೇ ತಲೆ ತಗ್ಗಿಸುವಂತಾಗಿದೆ. ಹಿಂಸಾಚಾರ ಆರಂಭವಾಗಿ ಒಂದು ವರ್ಷ ಕಳೆದಿದ್ದರೂ, ಶಾಂತಿಸ್ಥಾಪನೆ ಸಾಧ್ಯವಾಗಿಲ್ಲ. ಕೇಂದ್ರದಲ್ಲಿ ಎನ್​ಡಿಎ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದು ಭಾನುವಾರ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ, ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿಕೆಯ ಬೆನ್ನಲ್ಲೇ, ಪ್ರತಿಪಕ್ಷಗಳು ಮಣಿಪುರ ವಿಷಯವನ್ನು ಕೇಂದ್ರವಾಗಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ರಾಜಕೀಯ ಲೆಕ್ಕಾಚಾರಗಳು ಏನೇ ಇರಲಿ, ಈಶಾನ್ಯದ ಸಪ್ತಸಹೋದರಿಯರ ಪೈಕಿ (ಸೇವನ್ ಸಿಸ್ಟರ್ಸ್) ಒಂದಾಗಿರುವ ಮಣಿಪುರ ರಾಜ್ಯ ಮತ್ತೆ ಶಾಂತಿಯತ್ತ ಮರಳುವ ದಾರಿಯನ್ನು ಆದಷ್ಟು ಬೇಗನೆ ಕಂಡುಕೊಳ್ಳಬೇಕಿದೆ.

  ಮಣಿಪುರದಲ್ಲಿ ಮುಖ್ಯವಾಗಿ ನೆಲೆಸಿರುವುದು ಮೂರು ಸಮುದಾಯಗಳು. ಮೈತೇಯಿ, ನಾಗಾ ಮತ್ತು ಕುಕಿ. ಮೈತೇಯಿಗಳು ಹಿಂದುಗಳಾಗಿದ್ದು, ಸನಾತನ ಧರ್ಮವನ್ನು ಅನುಸರಿಸುತ್ತಾರೆ. ಇವರು ಆದಿವಾಸಿ ಅಥವಾ ವನವಾಸಿಗಳಲ್ಲ. ನಾಗಾ ಹಾಗೂ ಕುಕಿ ಆದಿವಾಸಿ (ಬುಡಕಟ್ಟು) ಸಮುದಾಯಕ್ಕೆ ಸೇರಿವೆ. ಮತ್ತು ನಾಗಾ ಹಾಗೂ ಕುಕಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ (ಎಸ್​ಟಿ) ನೀಡಲಾಗಿದೆ. ಈ ಮೂರು ಸಮುದಾಯಗಳ ಹೊರತಾಗಿ, ಮುಸ್ಲಿಮ್ ಜನಸಂಖ್ಯೆಯೂ ರಾಜ್ಯದಲ್ಲಿ ಏರಿಕೆ ಆಗುತ್ತಿದೆ. ಬುಡಕಟ್ಟು ಸಮಾಜಕ್ಕೆ ಸೇರದ ಮಯಾಂಗ್ ಸಮಾಜದವರೂ ದೇಶದ ಬೇರೆ-ಬೇರೆ ಭಾಗಗಳಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಈಗ ಮೈತೇಯಿ ಸಮುದಾಯ ಕೂಡ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಬೇಡಿಕೆ ಇಟ್ಟಿರುವುದೇ ಜನಾಂಗೀಯ ಘರ್ಷಣೆಗೆ ಮುಖ್ಯ ಕಾರಣ.

  ಸಪ್ತ ಸಹೋದರಿಯರಲ್ಲಿ ಮಣಿಪುರದಲ್ಲೇಕೆ ರಕ್ತಕಣ್ಣೀರು?

   

   

  ರಾಜಕೀಯ ಆಯಾಮ: ಕಳೆದ ವರ್ಷದ ಆಗಸ್ಟ್ (2023) 23ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಇದು ಬರೀ ಮಣಿಪುರದ ಹತ್ಯೆಯಲ್ಲ, ಇಡೀ ಭಾರತದ ಹತ್ಯೆ ನಡೆದಿದೆ’ ಎಂದು ಲೋಕಸಭೆಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಅಮಿತ್ ಷಾ, ‘ಮಣಿಪುರದಲ್ಲಿ ನಡೆದ ಘಟನೆಗಳು ನಿಜಕ್ಕೂ ನಾಚಿಕೆಗೇಡು. ಆದರೆ, ಈ ಘಟನೆಗಳ ಬಗ್ಗೆ ರಾಜಕೀಯ ಮಾಡುತ್ತಿರುವುದು ಅದಕ್ಕಿಂತ ನಾಚಿಕೆಗೇಡು’ ಎಂದು ತಿರುಗೇಟು ನೀಡಿದ್ದರು. ‘ಭಾರತ ಮಾತೆಯ ಹತ್ಯೆ ಎಂಬ ರಾಹುಲ್ ಪದಕ್ಕೆ ಕಾಂಗ್ರೆಸ್ ಸಂಸದರು ಚಪ್ಪಾಳೆ ಬಾರಿಸಿದ್ದು, ಅವರು ದೇಶದ ಬಗ್ಗೆ ಎಂಥ ಭಾವನೆ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿ’ ಎಂದು ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದರು. ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ನಡೆಯುತ್ತಿದ್ದಾಗಲೇ, ರಾಹುಲ್ ಗಾಂಧಿ ಆ ರಾಜ್ಯಕ್ಕೆ ಭೇಟಿ ನೀಡಿ ವಿವಾದ ಸೃಷ್ಟಿಸಿದರು. 2023ರ ಮೇ 29ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಣಿಪುರಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಬಿರೇನ್ ಸಿಂಗ್ ಜತೆ ಮಾತುಕತೆ ನಡೆಸಿ, ಪರಿಸ್ಥಿತಿ ಅವಲೋಕಿಸಿದರು. ಜೂನ್ 24ರಂದು ಸರ್ವಪಕ್ಷಗಳ ಸಭೆ ನಡೆಸಿದ ಷಾ, ಮಣಿಪುರದ ಸ್ಥಿತಿಯನ್ನು ಮನದಟ್ಟು ಮಾಡಿಕೊಟ್ಟರು. ಆದರೆ, ಕುಕಿ ಬಂಡುಕೋರರು ಪಕ್ಕದ ಮ್ಯಾನ್ಮಾರ್​ನಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಪಡೆದು ಮಣಿಪುರದಲ್ಲಿ ದಾಳಿ ನಡೆಸುತ್ತಿದ್ದಾರೆ ಎಂಬುದು ಮುಖ್ಯಮಂತ್ರಿ ಬಿರೇನ್ ಸಿಂಗ್ ಆರೋಪ.

  See also  ಹೊಸ ಅವತಾರ ತಾಳೋವರೆಗೂ ಗುಡ್​ ಬೈ ಎಂದ ಶಿಲ್ಪಾ: ಫೋಟೋ ಇಲ್ಲದ ಇನ್​ಸ್ಟಾಗ್ರಾಂ... ಅಭಿಮಾನಿಗಳಿಗೆ ಚಿಂತೆ!

  ಸಂಘರ್ಷಕ್ಕೆ ಭೂಮಿಯೇ ಕಾರಣ: ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಈ ಪ್ರಮಾಣದ ದ್ವೇಷ, ವೈಮನಸ್ಸು ಏಕಿದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ. ರಾಜ್ಯದಲ್ಲಿ ಕುಕಿ ಮತ್ತು ನಾಗಾ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಈ ಹಿಂದೆಯೇ ಸೇರಿಸಲಾಗಿದೆ. ‘ನಮ್ಮನ್ನೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ’ ಎಂಬುದು ಮೈತೇಯಿಗಳ ಬೇಡಿಕೆ. ಈ ಬೇಡಿಕೆಯಿಂದಲೇ ಕುಕಿಗಳು ಕೆರಳಿ ಕೆಂಡವಾಗಿದ್ದು, ಹಿಂಸಾಚಾರದಲ್ಲಿ ತೊಡಗಿದ್ದಾರೆ. ಮೈತೇಯಿಗಳಿಗೆ ಪರಿಶಿಷ್ಟ ಪಂಗಡದ ಸ್ಥಾನ ದೊರಕಿದರೆ, ಅವರು ಗುಡ್ಡಗಾಡು ಪ್ರದೇಶಗಳಲ್ಲಿ ಭೂಮಿ ಖರೀದಿಸಬಹುದು. ಇದರಿಂದ ತಮ್ಮ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ ಎಂಬುದು ಕುಕಿ ಸಮುದಾಯದ ಆತಂಕ. ಈ ಆತಂಕವೇ ಹಿಂಸಾಚರಕ್ಕೆ ತಿರುಗಿದ್ದು, ಶಾಂತಿ ಮಾತುಕತೆ, ಸಂಧಾನ ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ಎರಡೂ ಸಮುದಾಯಗಳು ಪರಸ್ಪರ ಗದ್ದೆ ಮತ್ತು ಮನೆಗಳಿಗೆ ಬೆಂಕಿ ಇಡುತ್ತಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಎಷ್ಟೋ ಜನರು ‘ಇನ್ನು ಮಣಿಪುರಕ್ಕೆ ವಾಪಸ್ ಬರುವುದಿಲ್ಲ’ ಎಂದು ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಇತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಎರಡೂ ಸಮುದಾಯಗಳ ಮುಖಂಡರು ದ್ವೇಷವನ್ನು ಮರೆತು, ಶಾಂತಿಯುತ ಸಂಧಾನಕ್ಕೆ ಮುಂದಾಗದಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

  ತಜ್ಞರು ಏನಂತಾರೆ?: ಇತಿಹಾಸವನ್ನು ಗಮನಿಸಿದರೆ ಈ ಎರಡೂ ಸಮುದಾಯಗಳು ಒಂದೇ ಜನಾಂಗಕ್ಕೆ ಸೇರಿದ್ದವು. ಪ್ರಸ್ತುತ ಮೈತೇಯಿಗಳು ಹಿಂದು ಧರ್ಮವನ್ನು ಅನುಸರಿಸುತ್ತಿದ್ದರೆ, ಕುಕಿಗಳು ಕ್ರೖೆಸ್ತ ಮತವನ್ನು ಅನುಸರಿಸುತ್ತಿದ್ದಾರೆ. ಎರಡೂ ಸಮುದಾಯಗಳು ಬೇರೆ-ಬೇರೆ ಧರ್ಮವನ್ನು ಅನುಸರಿಸುತ್ತಿರುವುದು ಕೂಡ ಕಲಹ ಹೆಚ್ಚಲು ಕಾರಣವಾಗಿದೆ. ಈ ಕಲಹ ರಾಜಕೀಯ ಆಯಾಮವನ್ನು ಪಡೆದುಕೊಂಡಿದ್ದು, ಇಡೀ ಪ್ರಕರಣ ಮತ್ತಷ್ಟು ಜಟಿಲವಾಗಲು ಕಾರಣ.

  ಕಾನೂನು ಕ್ರಮ: ರಾಜ್ಯ ಸರ್ಕಾರವೇ ಮಣಿಪುರ ವಿಧಾನಸಭೆಯಲ್ಲಿ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ 10 ಸಾವಿರ ಜನರ ಮೇಲೆ ಎಫ್​ಐಆರ್ ದಾಖಲಾಗಿದೆ. ಮೈತೇಯಿ ಮತ್ತು ಕುಕಿ ಮುಖಂಡರು ಹಿಂಸಾಚಾರಕ್ಕೆ ಭೂಗತ ಉಗ್ರರ ಸಹಕಾರ ಪಡೆಯುತ್ತಿರುವುದು ಕಳವಳ ಹೆಚ್ಚಿಸಿದೆ. ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು, ಮಹಿಳೆಯರ ನಿರ್ವಸ್ತ್ರ ಪ್ರಕರಣ ಸೇರಿದಂತೆ 29 ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿದೆ. ಒಂದು ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ತನಿಖೆ ನಡೆಸುತ್ತಿದೆ. ಇನ್ನೂ 4 ಪ್ರಕರಣಗಳನ್ನು ಸಿಬಿಐಗೆ ಮತ್ತು 5 ಪ್ರಕರಣಗಳನ್ನು ಎನ್​ಐಎಗೆ ವಹಿಸುವ ಪ್ರಕ್ರಿಯೆ ಜಾರಿಯಲ್ಲಿದೆ.

  ತೀವ್ರಗೊಂಡ ಆಕ್ರೋಶ: ಮಣಿಪುರ ಸ್ವಾತಂತ್ರ್ಯಪೂರ್ವದಿಂದಲೂ ರಾಜಪ್ರಭುತ್ವಕ್ಕೆ ಒಳಪಟ್ಟ ಪ್ರದೇಶವಾಗಿತ್ತು. 1947ರಲ್ಲಿ ಮಣಿಪುರದ ಮಹಾರಾಜರನ್ನು ರಾಜ್ಯದ ಆಡಳಿತ ಮುಖ್ಯಸ್ಥರಾಗಿ ನೇಮಿಸಲಾಯಿತು. ಆ ಮೂಲಕ ಇಲ್ಲಿ ಪ್ರಜಾಪ್ರಭುತ್ವ ಮಾದರಿಯ ಮೊದಲ ಸರ್ಕಾರ ಅಸ್ತಿತ್ವಕ್ಕೆ ಬಂತು. 1949ರಲ್ಲಿ ಮಣಿಪುರ ಭಾರತದಲ್ಲಿ ವಿಲೀನವಾಯಿತು ಮತ್ತು ಇದು ಕೇಂದ್ರಾಡಳಿತ ಪ್ರದೇಶವಾಗಿ ಉಳಿದುಕೊಂಡಿತು. 1972 ಜನವರಿ 21ರಂದು ಮಣಿಪುರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಲಾಯಿತು ಎಂಬುದು ಗಮನಾರ್ಹ. ಇಲ್ಲಿ ಮುಖ್ಯವಾದ ಸಂಗತಿಯೆಂದರೆ, ಬ್ರಿಟಿಷರರು ಮೈತೇಯಿಗಳನ್ನೂ ಪರಿಶಿಷ್ಟ ಪಂಗಡ ಎಂದೇ ಪರಿಗಣಿಸಿದ್ದರು. 1949ರಲ್ಲಿ ಮಣಿಪುರ ಭಾರತದಲ್ಲಿ ವಿಲೀನಗೊಂಡ ಬಳಿಕ ಆಗಿನ ಸರ್ಕಾರ ಮೈತೇಯಿಗಳನ್ನು ಪರಿಶಿಷ್ಟ ಪಂಗಡದಿಂದ ಹೊರಗಿಟ್ಟಿತು. ಆಗಿನಿಂದಲೂ, ಮೈತೇಯಿಗಳಲ್ಲಿ ಮನೆಮಾಡಿರುವ ಅಸಮಾಧಾನ, ಆಕ್ರೋಶ ಕಳೆದೊಂದು ವರ್ಷದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಿಶಿಷ್ಟ ಪಂಗಡಗಳಿಗೆ ಅರಣ್ಯ ಪ್ರದೇಶಗಳ ಒಡೆತನದ ಹಕ್ಕನ್ನು ನೀಡುವ ಸಂವಿಧಾನದ ಆರು ಮತ್ತು ಎಂಟನೇ ಪರಿಚ್ಛೇದದಲ್ಲಿ ಮಣಿಪುರವನ್ನು 1949ರಲ್ಲಿ ಸೇರಿಸಲಾಯಿತು. ಇದರ ಪರಿಣಾಮವಾಗಿ ಮೈತೇಯಿಗಳು ಭೂಮಿ ಖರೀದಿಸುವ ಹಕ್ಕನ್ನು ಕಳೆದುಕೊಂಡರು. ಇಂಫಾಲ್ ಕಣಿವೆ ಪ್ರದೇಶದ ಬಳಿಯೇ ಮೈತೇಯಿಗಳಿಗೆ ಸೇರಿದ ಹೆಚ್ಚಿನ ಜಮೀನಿತ್ತು. ಆದರೆ, ಇಲ್ಲೂ ಈಗ ಕುಕಿ ಸಮುದಾಯದವರು ಬಂದು ನೆಲೆಸಿದ್ದು, ಜನಾಂಗೀಯ ಘರ್ಷಣೆ ಹೆಚ್ಚುತ್ತಿದೆ. ಪ್ರಸ್ತುತ, ಮೈತೇಯಿ ಸಮುದಾಯದ ಜನಸಂಖ್ಯೆ ಹೆಚ್ಚಿದ್ದು, ಭೂಮಿಯ ಕೊರತೆ ಉಂಟಾಗಿದೆ. ಆದ್ದರಿಂದಲೇ, ತಮಗೂ ಪರಿಶಿಷ್ಟ ಪಂಗಡದ ಸ್ಥಾನ ನೀಡಬೇಕು. ಇದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಮಿ ಖರೀದಿಸಲು ಸಾಧ್ಯವಾಗುತ್ತದೆ ಎಂಬುದು ಮೈತೇಯಿ ಸಮುದಾಯ ಮುಖಂಡರ ಬೇಡಿಕೆ.

  See also  ಬಿಕಾಂ ಓದುವ ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ ಆರಂಭ:ಡಾ. ಕೆ.ಜಿ. ಕವಿತಾ

  ಹಿಂಸೆ ಆರಂಭವಾಗಿದ್ದು ಹೀಗೆ : ಆಲ್ ಟ್ರೖೆಬಲ್ ಸ್ಟೂಡೆಂಟ್ ಯೂನಿಯನ್ ಆಫ್ ಮಣಿಪುರ (ಎಟಿಎಸ್​ಯುುಎಂ) ಸಂಘಟನೆಯು 2023ರ ಮೇ 3ರಂದು ರಾಜ್ಯದಾದ್ಯಂತ ನಡೆಸಿದ ಟ್ರೖೆಬಲ್ ಸಾಲಿಡಾರಿಟಿ ಮಾರ್ಚ್​ನಲ್ಲಿ 60 ಸಾವಿರ ಜನರು ಪಾಲ್ಗೊಂಡರು. ರ್ಯಾಲಿಯ ಸಂದರ್ಭದಲ್ಲಿ ತೋರ್ಬಂಗ್ ಮತ್ತು ಚುರಾಚಂದಪುರ್ ಪ್ರದೇಶದಲ್ಲಿ ಗಲಭೆ ಸಂಭವಿಸಿ, 11 ಜನರು ಗಾಯಗೊಂಡರು. ಕಾಂಗ್ಪೋಕಿ ಜಿಲ್ಲೆಯಲ್ಲಿ ಇಬ್ಬರು ಗುಂಡೇಟಿಗೆ ಬಲಿಯಾದರು. ಮೇ 4ರಿಂದ 8ರ ಅವಧಿಯಲ್ಲಿ ಕುಕಿಗಳು ಮೈತೇಯಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ವಿಡಿಯೋಗಳು ದೊಡ್ಡ ಸಂಖ್ಯೆಯಲ್ಲಿ ಹರಿದಾಡಿ, ಹಿಂಸಾಚಾರ ಹೆಚ್ಚಿತು. ರಾಜಧಾನಿ ಇಂಫಾಲ್ ಮತ್ತು ರಾಜ್ಯದ ಆರು ಜಿಲ್ಲೆಗಳಿಗೆ ಗಲಭೆ ವಿಸ್ತರಿಸಿತು. ಪರಿಣಾಮ, ರಾಜ್ಯದೆಲ್ಲೆಡೆ ಅಂತರ್ಜಾಲ ಸಂಪರ್ಕವನ್ನು ಬಂದ್ ಮಾಡಲಾಯಿತು. ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ನಿರ್ವಸ್ತ್ರಗೊಳಿಸಿ, ಮೆರವಣಿಗೆ ಮಾಡಿ, ಲೈಂಗಿಕ ಕಿರುಕುಳ ನೀಡಿದ ವಿಡಿಯೋ ಬಹಿರಂಗಗೊಂಡು ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತು. ಈ ಘಟನೆ 2023ರ ಮೇ 4ರಂದು ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೋ ಬಹಿರಂಗಗೊಂಡಿದ್ದು ಜುಲೈ 19ರಂದು. ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ನಡೆಸಿತು. ‘ಮಹಿಳೆಯರನ್ನು ಹಿಂಸಾಚಾರಕ್ಕಾಗಿ ಅಸ್ತ್ರವಾಗಿ ಬಳಸಿಕೊಳ್ಳಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅಭಿಪ್ರಾಯಪಟ್ಟರು.

  ವೈಶಿಷ್ಟ್ಯ : ಮಣಿಪುರವು ಕಣಿವೆ ಮತ್ತು ಗುಡ್ಡಗಾಡು ಪ್ರದೇಶವನ್ನೇ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ವಿಶಿಷ್ಟ ಸಂಸ್ಕೃತಿಯಿಂದ ಗಮನ ಸೆಳೆದಿದೆ. ಮಣಿಪುರ ಹಬ್ಬ ಮತ್ತು ಉತ್ಸವಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿನ ವಿಶಿಷ್ಟ ಆಚರಣೆಗಳನ್ನು ಕಣ್ತುಂಬಿಕೊಳ್ಳಲು ದೇಶದ ಬೇರೆ-ಬೇರೆ ಭಾಗಗಳ ಜನರೂ ಮಣಿಪುರಕ್ಕೆ ಭೇಟಿ ನೀಡುತ್ತಾರೆ.

   

  ಹೀಗಿದೆ ಮಣಿಪುರ

  ರಾಜಧಾನಿ: ಇಂಫಾಲ್

  ಒಟ್ಟು ಜನಸಂಖ್ಯೆ: 36.49 ಲಕ್ಷ ಬಡತನ ರೇಖೆಗಿಂತ ಕೆಳಗಿರುವ

  ಜನಸಂಖ್ಯೆ: ಶೇಕಡ 37

  ಸಾಕ್ಷರತಾ ಪ್ರಮಾಣ: ಶೇಕಡ 77

   

  ಸೇನಾ ಔಟ್‌ಪೋಸ್ಟ್ ಮೇಲೆ ದಾಳಿ: ಕೆಲವೇ ಗಂಟೆಗಳಲ್ಲಿ ಜಮ್ಮುವಿನ ದೋಡಾದಲ್ಲಿ ಎನ್‌ಕೌಂಟರ್ ಆರಂಭ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts