More

  ಸಂಪಾದಕೀಯ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

  ನಟ ದರ್ಶನ್ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಖಂಡನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದ ಅಶ್ಲೀಲ ಕಾಮೆಂಟ್​ನ ಕಾರಣಕ್ಕೆ ಅಭಿಮಾನಿಯನ್ನು ಹತ್ಯೆ ಮಾಡಿಸಿದ ಆರೋಪದಡಿ ದರ್ಶನ್​ರನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿನ ವ್ಯಕ್ತಿ ಈ ರೀತಿಯ ಕೃತ್ಯಕ್ಕೆ ಕುಮ್ಮಕ್ಕು ನೀಡುವಂತೆ ನಡೆದುಕೊಳ್ಳುವುದು ಖಂಡನೀಯ. ನಟನಾಗಿ ಗುರುತಿಸಿಕೊಂಡಿರುವ ದರ್ಶನ್, ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಬರುವ ಹೊಗಳಿಕೆ, ತೆಗಳಿಕೆಗಳನ್ನು ಸರಿಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕಿತ್ತು.

  ಅಗತ್ಯವಿದ್ದರೆ ಕಾನೂನು ಪ್ರಕಾರ ಸ್ಥಳೀಯ ಪೊಲೀಸ್ ಠಾಣೆಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ ವ್ಯಕ್ತಿಯ ವಿರುದ್ಧ ದೂರು ಕೊಡಬಹುದಾಗಿತ್ತು. ಇದೇ ಪೊಲೀಸರು ಆ ಸಮಯದಲ್ಲಿ ತಪು್ಪ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸುತ್ತಿದ್ದರು. ಆದರೆ, ದರ್ಪ ಮತ್ತು ಹಣದ ಅಹಂಕಾರದಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡಿರುವುದು, ಸಿನಿಮಾ ರೀತಿಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಅಬ್ಬರಿಸಿರುವುದು ಅವಿವೇಕತನದ ಪರಮಾವಧಿ. ನಿಜಜೀವನವೇ ಬೇರೆ ಮತ್ತು ಸಿನಿಮಾವೇ ಬೇರೆ ಎಂಬುದು ನಟರು ಮತ್ತು ಅವರ ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಧಾಷ್ಟ್ಯವನ್ನು ಯಾರೂ, ಯಾವುದೇ ಕಾರಣಕ್ಕೂ ಪ್ರದರ್ಶಿಸಬಾರದು. ನಟ ದರ್ಶನ್, ಅವರ ಅಭಿಮಾನಿ ಬಳಗಕ್ಕೆ ‘ಹೀರೋ’ ಆಗಿರಬಹುದು. ಹಾಗಂತ, ಅತಿರೇಕದ ಅಂಧಾಭಿಮಾನವನ್ನು ಪ್ರದರ್ಶಿಸುವುದು, ಕುಕೃತ್ಯಗಳನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ.

  ನಾಯಕ ನಟನಾಗಲಿ, ಆತನ ಅಭಿಮಾನಿ ಬಳಗವಾಗಲಿ ಅತಿರೇಕಕ್ಕೆ ಹೋಗಬಾರದು. ತನ್ನ ನಾಯಕ ಮಾಡಿದ್ದೆಲ್ಲ ಸರಿ ಎಂದು ಸಮರ್ಥಿಸಿಕೊಂಡು ಆತನನ್ನೇ ಬೆಂಬಲಿಸಿಕೊಂಡು ಸಾರ್ವಜನಿಕ ಜೀವನದಲ್ಲಿ ವಾಗ್ವಾದ ಸೃಷ್ಟಿಸುವುದು, ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಮನಗಾಣಬೇಕು. ಮುಖ್ಯವಾಗಿ, ಸಾರ್ವಜನಿಕ ಬದುಕಿನಲ್ಲಿ ಇರುವವರು, ಸೆಲೆಬ್ರಿಟಿ ಎನಿಸಿಕೊಂಡವರು ತಮ್ಮ ನಡೆನುಡಿ, ಜೀವನಶೈಲಿಯಿಂದ ಸಮಾಜಕ್ಕೆ ಮಾದರಿ ಆಗಬೇಕೆ ಹೊರತು ತಪು್ಪಸಂದೇಶವನ್ನು ರವಾನಿಸಬಾರದು.

  See also  ಜನರ ಸಮಸ್ಯೆ ಬೇಗ ಪರಿಹರಿಸಿ

  ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಜನರು ಕೂಡ ಮುತುವರ್ಜಿ ವಹಿಸಬೇಕಿದೆ. ಯಾರದೋ ವೈಯಕ್ತಿಕ ಬದುಕನ್ನು ಟೀಕಿಸುವ, ಅವಹೇಳನ ಮಾಡುವ, ವ್ಯಕ್ತಿತ್ವಕ್ಕೆ ಘನತೆ ತರುವ ಕಾಮೆಂಟ್ಸ್​ಗಳು ಅನಗತ್ಯ. ಇದರಿಂದ ದೂರ ಉಳಿಯಬೇಕು. ಕಾಮೆಂಟ್ಸ್​ಗಳಲ್ಲಿ ಅಶ್ಲೀಲ ಪದ, ಚಿತ್ರಗಳ ಬಳಕೆ ಸೇರಿದಂತೆ ಇತರ ಕೃತ್ಯಗಳಲ್ಲಿ ಜನರು ತೊಡಗಿಕೊಳ್ಳಬಾರದು ಎಂಬ ಪಾಠವನ್ನೂ ಈ ಘಟನೆ ತಿಳಿಸಿಕೊಟ್ಟಿದೆ. ಇತ್ತೀಚೆಗೆ ಜಾಲತಾಣದಲ್ಲಿ ಸಿಕ್ಕ ಸಿಕ್ಕ ಫೋಟೋ, ವಿಡಿಯೋ ಮತ್ತು ಪೋಸ್ಟರ್​ಗಳಿಗೆ ಅನಗತ್ಯ ಕಾಮೆಂಟ್ ಮಾಡಿ ವಿವಾದದಲ್ಲಿ ತೊಡಗಿಸಿಕೊಳ್ಳುವ ಸಮೂಹ ಸಹ ಹುಟ್ಟಿಕೊಂಡಿದೆ. ಇದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಜೊತೆಗೆ ಸೈಬರ್ ಕಾನೂನು ಪ್ರಕಾರ ಅಪರಾಧವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅತಿರೇಕದ ವರ್ತನೆಯಿಂದ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಪಾಠವಾಗಿದೆ. ಯಾರ ಒತ್ತಡಕ್ಕೂ ಮಣಿಯದೆ ಈ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.

  ಜೂ. 18ಕ್ಕೆ ಪ್ರಧಾನಿ ಮೋದಿ ವಾರಾಣಸಿಗೆ ಭೇಟಿ: ಕಿಸಾನ್ ಸಮ್ಮಾನ್ ನಿಧಿ ಕಂತು ಬಿಡುಗಡೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts