

ನವದೆಹಲಿ: ಜೂನ್ ತಿಂಗಳಿನಿಂದ ಪ್ರಾರಂಭವಾಗಲಿರುವ ಬಹುನಿರೀಕ್ಷಿತ ಟಿ-20 ವಿಶ್ವಕಪ್ಗೆ ಈಗಾಗಲೇ ಟೀಂ ಇಂಡಿಯಾದ ಸಂಭವನೀಯ ಪಟ್ಟಿ ಹೊರಬಿದ್ದಿದೆ. ಆದರೆ, 15 ಆಟಗಾರರ ಸಂಪೂರ್ಣ ಅಧಿಕೃತ ಪಟ್ಟಿಗೆ ಕ್ಷಣಗಣನೆ ಶುರುವಾಗಿದೆ. ಯಾರನ್ನೆಲ್ಲಾ ಆಯ್ಕೆ ಮಾಡಿಕೊಳ್ಳಬೇಕು, ಯಾರಿಗೆ ಸ್ಥಾನ ಕೊಡಬೇಕು ಎಂಬುದರ ಕುರಿತು ಮುಂಬೈನಲ್ಲಿ ಬಿಸಿಸಿಐ ಚೀಫ್ ಸೆಲೆಕ್ಟರ್ಗಳು ಚರ್ಚಿಸುತ್ತಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ಕೊಟ್ಟವರಿಗೆ ಮೊದಲ ಆದ್ಯತೆ ಸಿಕ್ಕಿದೆಯೇ? ಎಂಬುದು ಶೀಘ್ರವೇ ತಿಳಿಯಲಿದೆ.
ವರದಿಗಳ ಪ್ರಕಾರ, ಬಿಸಿಸಿಐನ ಮುಖ್ಯ ಆಯ್ಕೆಗಾರ, ಮಾಜಿ ಟೀಂ ಇಂಡಿಯಾ ಆಟಗಾರರಾದ ಅಜಿತ್ ಅಗರ್ಕರ್ ಮತ್ತು ಕೆಲವು ಬಿಸಿಸಿಐ ಅಧಿಕಾರಿಗಳು ದೀರ್ಘಕಾಲದ ಚರ್ಚೆ ನಡೆಸುತ್ತಿದ್ದು, ಶೀಘ್ರವೇ 15 ಆಟಗಾರರ ತಂಡವನ್ನು ಪ್ರಕಟಿಸಲು ಎದುರುನೋಡುತ್ತಿದೆ. ಟಾಪ್ ಆರ್ಡರ್ನಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ಇದ್ದರೆ. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಇರಲಿದ್ದಾರೆ ಎಂದು ಹೇಳಲಾಗಿದೆ.
ಇದೆಲ್ಲದರ ಮಧ್ಯೆ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶಿವಂ ದುಬೆ, ರಿಂಕು ಸಿಂಗ್, ಕೆ.ಎಲ್. ರಾಹುಲ್, ಯಜುವೇಂದ್ರ ಚಹಲ್, ಶುಭಮನ್ ಗಿಲ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್ ಆಯ್ಕೆಗಾರರ ಗಮನದಲ್ಲಿದ್ದಾರೆ. ತಂಡದಲ್ಲಿ ಶುಭಮನ್ ಗಿಲ್ಗೆ ಅವಕಾಶ ಸಿಗುವುದು ಬಹುತೇಕ ಡೌಟ್ ಇದ್ದು, ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ರಾಹುಲ್ ಮತ್ತು ಸಂಜು ಮಧ್ಯೆ ಟಫ್ ಫೈಟ್ ಇದೆ.
ವರದಿಗಳ ಪ್ರಕಾರ, ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಮೊದಲ ಚಾಯ್ಸ್ ಆಗಿದ್ದರೆ, ಐಪಿಎಲ್ನಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿ ಮಿಂಚುತ್ತಿರುವ ಯಜುವೇಂದ್ರ ಚಹಲ್ರನ್ನು ಆಯ್ಕೆ ಮಾಡಿಕೊಳ್ಳುವುದು ಅನುಮಾನ ಎಂದು ವರದಿ ಉಲ್ಲೇಖಿಸಿದೆ. ಇತ್ತೀಚೆಗೆ ನಡೆದ ಕ್ರಿಕೆಟ್ ಫ್ಯಾನ್ಸ್ಗಳ ವೋಟಿಂಗ್ ಪ್ರಕಾರ, ಈ ಬಾರಿಯ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಿಷಭ್ ಪಂತ್ಗೆ ಅವಕಾಶ ಸಿಗಲಿ ಎಂದು ಒಂದಷ್ಟು ಜನ ಅಭಿಪ್ರಾಯಿಸಿದರೆ, ಹಾರ್ದಿಕ್ ಪಾಂಡ್ಯ ತಂಡದ ಭಾಗವಾಗಿರುವುದು ಬೇಡ ಎಂದು ಮತ್ತೊಂದಷ್ಟು ಅಭಿಮಾನಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).