'ಪಠಾಣ್​' ನಂತರ 'ಪಠಾಣ್​ 2'? ಹಿಂಟ್​ ಕೊಟ್ಟ ಕಿಂಗ್ ಖಾನ್​

Pathaan
Published on

ಮುಂಬೈ: ಶಾರೂಖ್​ ಖಾನ್​ ಅಭಿನಯದ 'ಪಠಾಣ್' ಚಿತ್ರದ ಟೀಸರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಕಿಂಗ್​ ಖಾನ್​ರ ಹುಟ್ಟುಹಬ್ಬದ ಅಂಗವಾಗಿ ಈ ಟೀಸರ್​ ಬಿಡುಗಡೆಯಾಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿತ್ತು. ಈಗ ಈ ಚಿತ್ರದ ಮುಂದುವರೆದ ಭಾಗ ಬಿಡುಗಡೆಯಾಗುತ್ತದಾ ಎಂಬ ಚರ್ಚೆಯೊಂದು ಶುರುವಾಗಿದೆ. ಅದಕ್ಕೆ ಕಾರಣ ಶಾರೂಖ್​ ಖಾನ್​ ಅವರ ಹೇಳಿಕೆ.

ಇತ್ತೀಚೆಗೆ ಶಾರೂಖ್​ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 'ದಿ ಎಸ್​ಆರ್​ಕೆ ಡೇ' ಹೆಸರಿನ ಈ ಕಾರ್ಯಕ್ರಮದಲ್ಲಿ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಆಯೋಜಿಸಲಾಗಿದ್ದ 'ದಿ ಎಸ್​ಆರ್​ಕೆ ಡೇ' ಎಂಬ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿರುವ ಶಾರೂಖ್​, 'ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಆಶೀರ್ವಾದವಿದ್ದರೆ, ಈ ಚಿತ್ರದ ಮುಂದುವರೆದ ಭಾಗವೂ ಬರಬಹುದು' ಎಂದು ಹೇಳುವ ಮೂಲಕ 'ಪಠಾಣ್​' ಗೆದ್ದರೆ ಸೀಕ್ವೆಲ್​ ಬರುವ ಸಾಧ್ಯತೆ ಇದೆ ಎಂದು ಹಿಂಟ್​ ಕೊಟ್ಟಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾತನಾಡಿರುವ ಅವರು, 'ನಿಮಗೆಲ್ಲರಿಗೂ ಚಿತ್ರ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಎಲ್ಲರೂ ಬಹಳ ಕಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ' ಎಂದು ಹೇಳಿದ್ದಾರೆ.

ಇನ್ನು, ಶಾರೂಖ್​ ಖಾನ್​ಗೆ ತಮ್ಮ ಯಾವ ಚಿತ್ರದ ಮುಂದುವರೆದ ಭಾಗ ಬರಬೇಕು ಎಂಬ ಆಸೆ ಇದೆ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ರಾ-ಒನ್​' ಚಿತ್ರದ ಮುಂದುವರೆದ ಭಾಗ ಬರಬೇಕು ಎಂಬ ಆಸೆ ತಮಗಿದೆ ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, 'ಪಠಾಣ್​' ಚಿತ್ರವು 2023ರ ಜನವರಿ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಯಶ್​ ಚೋಪ್ರಾ ನಿರ್ಮಿಸಿರುವ ಈ ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಈ ಚಿತ್ರ ಮೂಡಿಬರಲಿದೆ. ಚಿತ್ರದಲ್ಲಿ ಶಾರೂಖ್​ ಖಾನ್​ ಜತೆಗೆ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಹಾಂ ಅವರನ್ನು ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net