

ದುಬೈ: ಭಾರತ ತಂಡದ ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮ ಹಾಗೂ ಆಲ್ರೌಂಡರ್ ಸ್ನೇಹಾ ರಾಣಾ ಅವರ ಹೆಸರನ್ನು ಬುಧವಾರ ಐಸಿಸಿ ಮಹಿಳಾ ಜೂನ್ ತಿಂಗಳ ಆಟಗಾರ್ತಿಯರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಏಕೈಕ ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ತೋರಿದ ನಿರ್ವಹಣೆ ಆಧಾರದ ಮೇಲೆ ಈ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ. ಭಾರತದ ಆಟಗಾರ್ತಿಯರ ಜತೆಗೆ ಇಂಗ್ಲೆಂಡ್‌ನ ಎಡಗೈ ಸ್ಪಿನ್ನರ್ ಸೋಫಿ ಎಕ್ಸೆಲ್‌ಸ್ಟೋನ್ ಹೆಸರನ್ನು ಕೂಡ ಮಹಿಳಾ ವಿಭಾಗದಿಂದ ನಾಮನಿರ್ದೇಶನ ಮಾಡಲಾಗಿದೆ.
17 ವರ್ಷದ ಶೆಫಾಲಿ ವರ್ಮ, ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಗಮರ್ನಾಹ ನಿರ್ವಹಣೆ ತೋರಿದ್ದರು. ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಸಿಡಿಸಿದ್ದ ಶೆಫಾಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೆ, ಏಕದಿನ ಕ್ರಿಕೆಟ್‌ಗೂ ಶೆಫಾಲಿ ಇಂಗ್ಲೆಂಡ್ ಪ್ರವಾಸದಲ್ಲೇ ಪದಾರ್ಪಣೆ ಮಾಡಿದ್ದರು. ಈ ಸರಣಿಯಲ್ಲಿ ಸರಾಸರಿ 59 ರಂತೆ ರನ್ ಪೇರಿಸಿದ್ದರು. ಆಲ್ರೌಂಡರ್ ಸ್ನೇಹಾ ರಾಣಾ ಟೆಸ್ಟ್ ಪಂದ್ಯದ್ಲಲಿ 154 ಎಸೆತಗಳನ್ನು ಎದುರಿಸಿ ಅಜೇಯ 80 ರನ್ ಪೇರಿಸಿದ್ದು, ಜತೆಗೆ ಭಾರತ ತಂಡ ಇಂಗ್ಲೆಂಡ್ ಎದುರು ಡ್ರಾ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪುರುಷರ ವಿಭಾಗದಿಂದ ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೆವೊನ್ ಕಾನ್‌ವೇ ಹಾಗೂ ವೇಗಿ ಕೈಲ್ ಜೇಮಿಸನ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಹೆಸರುಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಪುರುಷರ ವಿಭಾಗದಿಂದ ಭಾರತದ ಆಟಗಾರರು ನಾಮನಿರ್ದೇಶನಗೊಂಡಿಲ್ಲ.