ಮಾನವರ ಮೇಲೆ ಮೂರನೇ ಹಂತದ ಪ್ರಯೋಗದಲ್ಲಿ ದೇಶೀಯ ಕಂಪನಿಯ ಕರೊನಾ ಲಸಿಕೆ

Vaccine
Published on

ನವದೆಹಲಿ: ಕರೊನಾ ವೈರಸ್​ ನಿಗ್ರಹಕ್ಕಾಗಿ ಭಾರತೀಯ ಕಂಪನಿಯೊಂದು ತಯಾರಿಸುತ್ತಿರುವ ಲಸಿಕೆ ಮಹತ್ವದ ಘಟ್ಟ ತಲುಪಿದೆ.

ಲಸಿಕೆಯನ್ನು ಈಗಾಗಲೇ ಮಾನವರ ಮೇಲೆ ಪ್ರಯೋಗಿಸಲಾಗುತ್ತಿದ್ದು, ಮೂರನೇ ಹಂತದ ಪ್ರಯೋಗ ನಡೆದಿದೆ ಎಂದು ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ (ಎಸ್​ಐಐ) ಹೇಳಿದೆ.

ಎಸ್​ಐಐ ಜಗತ್ತಿನಲ್ಲಿಯೇ ಲಸಿಕೆ ತಯಾರಿಸುವ ಅತಿದೊಡ್ಡ ಘಟಕವಾಗಿದೆ. ಲಂಡ್​ನ ಆಕ್ಸ್​ಫರ್ಡ್​ ವಿವಿಯ ಸಂಶೋಧನಾ ತಂಡ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಉತ್ಪಾದಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಪ್ರಯೋಗದ ಹಂತಗಳು ಪೂರ್ಣಗೊಂಡದ್ದೇ ಆದಲ್ಲಿ, ಆಕ್ಟೋಬರ್​ನಿಂದಲೇ ಲಸಿಕೆ ತಯಾರಿಕೆ ಆರಂಭವಾಗಲಿದೆ. ಮೊದಲ ಆರು ತಿಂಗಳು ಪ್ರತಿತಿಂಗಳು 50 ಲಕ್ಷ ಡೋಸ್​ ಲಸಿಕೆಗಳನ್ನು ಉತ್ಪಾದಿಸಲಾಗುವುದು ನಂತರದ ಆರು ತಿಂಗಳು ಪ್ರತಿತಿಂಗಳು 1 ಕೋಟಿ ಡೋಸ್​ ಲಸಿಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಎಸ್​ಐಐ ಮುಖ್ಯಸ್ಥ ಅದಾರ್​ ಪೂನಾವಾಲಾ ಹೇಳಿದ್ದಾರೆ.

ಈ ನಡುವೆ, ಎಸ್​ಐಐ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಪುಣೆಯ ನಾಯ್ಡು ಆಸ್ಪತ್ರೆಯಲ್ಲಿರುವ ಕರೊನಾ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ. ಕಳೆದ 10 ದಿನಗಳಿಂದ ಈ ಕಾರ್ಯ ನಡೆಯುತ್ತಿದೆ. ಕರೊನಾ ಸೋಂಕಿತರು, ಶಂಕಿತರು, ರೋಗದ ಗುಣಲಕ್ಷಣ ಇಲ್ಲದವರು ಹಾಗೂ ಕೋವಿಡ್​ಗೆ ತುತ್ತಾದವರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಅಧ್ಯಯನ ನಡೆಯುತ್ತಿದ್ದು, ಅಂತಿಮ ಫಲಿತಾಂಶಕ್ಕೂ ಮುನ್ನ ಹಲವು ಮಾಹಿತಿಗಳನ್ನು ಕಲೆ ಹಾಕಬೇಕಾಗಿದೆ ಎಂದು ಎಸ್​ಐಐ ತಜ್ಞರು ಮಾಹಿತಿ ನೀಡಿದ್ದಾರೆ.

ಕರೊನಾ ವಿರುದ್ಧ ಹೋರಾಟಕ್ಕಾಗಿ ಅಭಿವೃದ್ಧಿಪಡಿಸುವ ಯಾವ ಲಸಿಕೆಗೂ ಪೇಟೆಂಟ್​ ಪಡೆಯುವುದಿಲ್ಲ ಎಸ್​ಐಐ ಸ್ಪಷ್ಟಪಡಿಸಿದೆ. ಇದನ್ನು ಯಾರೂ ಬೇಕಾದರೂ ಉತ್ಪಾದಿಸಿ ಮಾರಾಟ ಮಾಡಬಹುದು. ಭಾರತದಲ್ಲಷ್ಟೇ ಅಲ್ಲ, ವಿಶ್ವದ ಯಾವುದೇ ಭಾಗದವರೂ ಕೂಡ ಇದನ್ನು ಉತ್ಪಾದಿಸಿ ಮಾರಾಟ ಮಾಡಲು ಹಕ್ಕು ಹೊಂದಿರಲಿದ್ದಾರೆ ಎಂದು ಪೂನಾವಾಲಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net