

ತುಮಕೂರು: ಕರೊನಾ ವೈರಸ್ ನಿಯಂತ್ರಣದ ಸಲುವಾಗಿ ಎಲ್ಲ ವಿಮಾನನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಆದರೆ ತುಮಕೂರಿನ ಹಿರಿಯ ಆರೋಗ್ಯ ಸಹಾಯಕನೋರ್ವ ಬೇಕಾಬಿಟ್ಟಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಇದೀಗ ಅಮಾನತುಗೊಂಡಿದ್ದಾರೆ.
ತುಮಕೂರು ರೈಲ್ವೆ ನಿಲ್ದಾಣದಲ್ಲಿ ಖುರ್ಚಿ ಹಾಕಿಕೊಂಡು, ಕೈಯಲ್ಲಿ ಥರ್ಮಲ್ ಸ್ಯ್ಕಾನರ್ ಹಿಡಿದು ಕುಳಿತಿದ್ದ ಹಿರಿಯ ಆರೋಗ್ಯ ಸಹಾಯಕ ನರಸಿಂಹಮೂರ್ತಿ ಪ್ರಯಾಣಿಕರತ್ತ ಸುಮ್ಮನೆ ಒಂದು ಬಾರಿ ಅದನ್ನು ತೋರಿಸುತ್ತಿದ್ದರಷ್ಟೇ. ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಮಾತನಾಡುತ್ತ, ಕಾಟಾಚಾರಕ್ಕೆ ಥರ್ಮಲ್ ಸ್ಕ್ಯಾನ್ ಮಾಡುತ್ತಿದ್ದರು. ಅವರು ಪ್ರಯಾಣಿಕರತ್ತ ನೋಡುತ್ತಲೂ ಇರಲಿಲ್ಲ. ಅಷ್ಟರಮಟ್ಟಿಗೆ ನಿರ್ಲಕ್ಷ್ಯ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.
ಬೇಜವಾಬ್ದಾರಿಯುತವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡಿದ್ದ ನರಸಿಂಹಮೂರ್ತಿಯವರನ್ನು ಡಿಎಚ್ಒ ಡಾ. ಚಂದ್ರಿಕಾ ಅಮಾನತುಗೊಳಿಸಿದ್ದಾರೆ.