

ನವದೆಹಲಿ : ಮಾಜಿ ಸಚಿವೆ ಹಾಗೂ ಉತ್ತರಾಖಂಡ ವಿಧಾನಸಭೆಯ ವಿರೋಧಪಕ್ಷದ ನಾಯಕಿಯಾಗಿದ್ದ ಇಂದಿರಾ ಹೃದಯೇಶ್ ಅವರು ಇಂದು ದೆಹಲಿಯಲ್ಲಿ ನಿಧನ ಹೊಂದಿದ್ದಾರೆ. 80 ವರ್ಷ ವಯಸ್ಸಾಗಿದ್ದ ಇಂದಿರಾ ಅವರು, ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು, ಹಿರಿಯ ಕಾಂಗ್ರೆಸ್ ನಾಯಕಿಯಾಗಿದ್ದರು.
ದೆಹಲಿಗೆ ಪಕ್ಷದ ಸಭೆಯೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಇಂದಿರಾ ಅವರು, ಉತ್ತರಾಖಂಡ್ ಸದನ್ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಹೃದಯಾಘಾತವಾಗಿ ಮರಣ ಹೊಂದಿದರು ಎಂದು ಉತ್ತರಾಖಂಡ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ತಿಳಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಉತ್ತರಾಖಂಡಕ್ಕೆ ಒಯ್ಯಲಾಗುತ್ತಿದೆ ಎನ್ನಲಾಗಿದೆ.
ರಾಜ್ಯದ ಸಿಎಂ ತೀರಥ್ ಸಿಂಗ್ ರಾವತ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಜನಹಿತದ ವಿಚಾರಗಳನ್ನು ಪ್ರಸ್ತಾಪಿಸಿ ಚರ್ಚೆಗೆ ತರುವುದರಲ್ಲಿ ಇಂದಿರಾ ಅವರು ಮಹತ್ವದ ಪಾತ್ರ ವಹಿಸುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)