ವಕೀಲ, ಮಕ್ಕಳ ಹಕ್ಕುಗಳು, ಕಾಯ್ದೆ, ಕಾನೂನು ಅರಿವು,

awareness
ಶೃಂಗೇರಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಮಕ್ಕಳ ಹಕ್ಕುಗಳು ಮತ್ತು ಕಾನೂನು ಅರಿವು ಕಾರ್ಯಾಗಾರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್.ಮಂಜು, ವಿದ್ಯಾರ್ಥಿಗಳು ಉದ್ಘಾಟಿಸಿದರು. ರಾಘವೇಂದ್ರ, ಗೌರಮ್ಮ, ಶಿವಕುಮಾರ್, ರೇವಣ್ಣ, ಭಾಗೀರಥಿ ಇದ್ದರು.
Published on

ಶೃಂಗೇರಿ: ಶಾಲಾ ಕಾಲೇಜುಗಳ ಅಸುಪಾಸು ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಕಾನೂನಿಗೆ ವಿರುದ್ಧ. ಮಾರಾಟ ಮಾಡುತ್ತಿರುವುದು ಕಂಡುಬಂದರೆ ಠಾಣೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದೂರು ದಾಖಲಿಸಬಹುದು ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.

ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮಕ್ಕಳ ಹಕ್ಕುಗಳು ಮತ್ತು ಮಕ್ಕಳಿಗಿರುವ ಕಾಯ್ದೆ, ಕಾನೂನು ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಭವಿಷ್ಯದ ನೇತಾರರು. ಶಾಲೆಯ ಮಕ್ಕಳ ಸಂರಕ್ಷಣಾ ಸಮಿತಿ ಸದಸ್ಯರಾಗಲು ಮುಕ್ತ ಅವಕಾಶವಿದೆ. ಸಮಾಜದ ಹಿತಕ್ಕಾಗಿ ದುಡಿಯುವ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವೆ ಗುಣಾತ್ಮಕ ಸಂಬಂಧ ಬೆಳೆಸಲು ಸಂವಿಧಾನ ಕಾಯ್ದೆಗಳನ್ನು ರೂಪಿಸಿದೆ ಎಂದರು.
ಶಾಲೆಯಲ್ಲಿ ಉತ್ತಮ ಆಡಳಿತ ಇರಬೇಕೆಂದು ಬಯಸಲು, ಎಲ್ಲ ಅಟೋಟ ಸ್ಪರ್ಧೆಗಳಲ್ಲಿ ಭಾಗಿಯಾಗಲು ವಿದ್ಯಾರ್ಥಿಗಳಿಗೆ ಸಂಪೂರ್ಣ ಅಧಿಕಾರವಿದೆ. 18 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ, ಅವರ ಬಗ್ಗೆ ಅಶ್ಲೀಲವಾಗಿ ಮಾತನಾಡಿದರೆ ನೇರವಾಗಿ ದೂರು ದಾಖಲಿಸುವ ಹಕ್ಕಿದೆ. ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಿದರೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದರೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಎದುರಾದರೂ 1098ಕ್ಕೆ ಕರೆ ಮಾಡಿ ದೂರು ನೀಡಬಹುದು. ವಸತಿ ನಿಲಯಗಳಲ್ಲಿ ಕಿರುಕುಳ, ತೊಂದರೆ ನೀಡಿದ್ದರೆ ಸಲಹಾ ಪೆಟ್ಟಿಗೆಗೆ ದೂದು ಬರೆದು ಹಾಕಿ. ಹೋಟೆಲ್, ಪೆಟ್ರೋಲ್ ಬಂಕ್ ಇನ್ನಿತರ ಪ್ರದೇಶದಲ್ಲಿ ಬಾಲಕಾರ್ಮಿಕರು ಕೆಲಸ ಮಾಡುವುದು ಕಾನೂನಿಗೆ ವಿರುದ್ಧ. ಇಂತಹ ಪ್ರಕರಣ ಕಂಡುಬಂದರೆ ಪೊಲೀಸ್ ಠಾಣೆ ಅಥವಾ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಕಚೇರಿಗೆ ಪತ್ರ ಬರೆಯಬೇಕು ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್.ಮಂಜು ಮಾತನಾಡಿ, ಇಂದಿನ ಮಕ್ಕಳೇ ಇಂದಿನ ಪ್ರಜೆಗಳು. ವಿದ್ಯಾರ್ಥಿಗಳು ಅವರಿಗಿರುವ ಕಾನೂನು ಮತ್ತು ಕಾಯ್ದೆಗಳ ಬಗ್ಗೆ ಸಂಪೂರ್ಣ ತಿಳಿದಿರಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಮಕ್ಕಳು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆಗಳನ್ನು ನೀಡಬೇಕು ಎಂದರು.
ಸಿಡಿಪಿಒ ಎನ್.ಜಿ.ರಾಘವೇಂದ್ರ ಮಾತನಾಡಿ, ಮಕ್ಕಳಲ್ಲಿ ಪ್ರಸ್ತುತ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಮಾಧ್ಯಮಗಳಲ್ಲಿ ದಿನನಿತ್ಯ ಒಂದಲ್ಲಾ ಒಂದು ಪ್ರಕರಣ ವರದಿಯಾಗುತ್ತಲೇ ಇರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೆ ಹದಿಹರೆಯದ ವಯಸ್ಸಿನಲ್ಲಿ ಉತ್ತಮ ಚಿಂತನೆಗಳನ್ನು ಬೆಳೆಸಿಕೊಂಡು ಅತ್ಯುತ್ತಮ ಸಾಧನೆ ಮಾಡುವ ಗುರಿ ಹೊಂದಬೇಕು.
ಕಾರ್ಯಾಗಾರದಲ್ಲಿ ಉಪನ್ಯಾಸಕ ಎಚ್.ಎ ಪ್ರಕಾಶ್ ಮತ್ತು ವೈ.ಆರ್.ರಾಜೀವ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ತಹಸೀಲ್ದಾರ್ ಗೌರಮ್ಮ, ಬಿಇಒ ಭಾಗೀರಥಿ, ಜಿಲ್ಲಾ ನಿರೂಪಣಾಧಿಕಾರಿ ಲೋಕೇಶಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರೇವಣ್ಣ, ದೈಹಿಕ ಶಿಕ್ಷಣ ಪರೀವೀಕ್ಷಕ ಸಿದ್ದರಾಜು, ಶಿವಕುಮಾರ್, ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net