ಬಂಟ್ವಾಳ: ಕೆಲಸ ಬಲ್ಲವನಿಗೆ ಬದುಕಿಗೆ ಚಿಂತೆ ಇಲ್ಲ. ಭಕ್ತಿ ಶ್ರದ್ಧೆ ನಂಬಿಕೆಯಿಂದ ಮನುಷ್ಯನ ಜೀವನ ನಿಂತಿದೆ. ಸೇವೆ ಮತ್ತು ಆರ್ಥಿಕ ಸದೃಢತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮೂಲ ಮಂತ್ರ. ಆ ಮೂಲಕ ಪ್ರತಿ ಕುಟುಂಬದಲ್ಲಿ ಆರ್ಥಿಕ ಸುಸ್ಥಿರತೆ ತರುವ ಸಂಕಲ್ಪದೊಂದಿಗೆ ಹಣಕಾಸು ಸಂಸ್ಥೆಯೊಂದಿಗಿನ ಸಂಪರ್ಕ ಸೇತುವಾಗಿ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಹೇಳಿದರು.
ಬಿ.ಸಿ.ರೋಡಿನಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ವ್ಯಾಪ್ತಿಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಒಕ್ಕೂಟಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮುದಾಯ ಹಾಗೂ ಸಂಘ ಸದಸ್ಯರಿಗೆ ಆಗುವ ಪ್ರಯೋಜನ ಬಗ್ಗೆ ಪ್ರಗತಿಬಂಧು ಸ್ವ ಸಹಾಯ ಕೇಂದ್ರ ಒಕ್ಕೂಟ ನಿಕಟ ಪೂರ್ವ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಎಸ್‌ಬಿಐ ಬ್ಯಾಂಕ್ ಮಲ್ಲಿಕಟ್ಟೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ಭವಾನಿ ಸ್ವಸಹಾಯ ಸಂಘಗಳು ಬ್ಯಾಂಕಿಗೆ ನೀಡಬೇಕಾದ ದಾಖಲಾತಿ ಬ್ಯಾಂಕಿನ ಪ್ರತಿನಿಧಿಯಾಗಿ ಎಸ್‌ಕೆಡಿಆರ್‌ಡಿಪಿ ನಿರ್ವಹಿಸುತ್ತಿರುವ ಜವಾಬ್ದಾರಿಗಳ ಬಗ್ಗೆ, ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಯೋಜನೆ ದತ್ತಾಂಶ ಹಾಗೂ ಸ್ವಸಹಾಯ ಸಂಘ ವ್ಯವಸ್ಥೆ ಕುರಿತು. ಎಸ್.ಕೆ.ಡಿ.ಆರ್.ಡಿ.ಪಿ, ಎಂ.ಐ.ಎಸ್.ಯೋಜನಾಧಿಕಾರಿ ಪ್ರೇಮನಾಥ್ ಸಂಘದ ಸಾಲ ಮರುಪಾವತಿ ಬಗ್ಗೆ, ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಯೋಜನೆ ವಿವಿಧ ಕಾರ್ಯಕ್ರಮ ಮಾಹಿತಿ ನೀಡಿದರು.
ವಲಯ ಅಧ್ಯಕ್ಷರಾದ ಜನಾರ್ದನ ಆಚಾರ್ಯ, ಲೀಡಿಯೋ ಪಿಂಟೊ, ಗಂಗಾಧರ ಭಂಡಾರಿ, ಜಯಲಕ್ಷ್ಮೀ, ಮನೋಹರ್ ಕುಲಾಲ್, ರಾಧಾಕೃಷ್ಣ ಆಚಾರ್ಯ, ಉಮೇಶ್, ಶೌರ್ಯ ತಂಡದ ಕ್ಯಾಪ್ಟನ್ ಪ್ರಕಾಶ್ ಉಪಸ್ಥಿತರಿದ್ದರು. ಯೋಜನೆ ಕಾರ್ಯ ಚಟುವಟಿಕೆ ವಿವರಿಸುವ ಕಿರು ಚಿತ್ರ ಪ್ರದರ್ಶನ ಮಾಡಲಾಯಿತು.
ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಎಂ.ಪ್ರಾಸ್ತಾವಿಸಿ, ಸ್ವಾಗತಿಸಿದರು. ಪಾಣೆಮಂಗಳೂರು ವಲಯ ಮೇಲ್ವಿಚಾರಕಿ ಅಮಿತಾ ವಂದಿಸಿ, ತುಂಬೆ ವಲಯ ಮೇಲ್ವಿಚಾರಕಿ ಮಮತಾ ನಿರೂಪಿಸಿದರು.
