ಮಂಜೇಶ್ವರ ಸ್ನೇಹಾಲಯದಲ್ಲಿ ವ್ಯಸನಮುಕ್ತ ಕೇಂದ್ರ

10-essential-facts-about-alcohol-abuse-722x406
Published on

ಕಾಸರಗೋಡು: ಮಂಜೇಶ್ವರದ ಬಾಚಳಿಕೆಯಲ್ಲಿ ಕಳೆದ 15 ವರ್ಷಗಳಿಂದ ಮಾನಸಿಕ ರೊಗಿಗಳ ಆರೈಕೆ ಮಾಡುತ್ತಿರುವ ’ಸ್ನೇಹಾಲಯ’ ವ್ಯಸನಮುಕ್ತ ಸಮಾಜದ ಪಣತೊಟ್ಟಿದ್ದು, ಇದಕ್ಕಾಗಿ ಸ್ನೇಹಾಲಯ ವ್ಯಸನಮುಕ್ತ ಕೇಂದ್ರವನ್ನು ಆರಂಭಿಸಿದೆ. ನೂತನ ಕೇಂದ್ರದ ಉದ್ಘಾಟನೆ ಅ. 2ರಂದು ಬೆಳಗ್ಗೆ 9.30ಕ್ಕೆ ನಡೆಯಲಿರುವುದಾಗಿ ಸಂಸ್ಥೆ ಸ್ಥಾಪಕ, ಮ್ಯಾನೇಜಿಂಗ್ ಟ್ರಸ್ಟಿ ಜೋಸೆಫ್ ಕ್ರಾಸ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಜೇಶ್ವರದ ಬಾಚಳಿಕೆಯಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಲಭಿಸಿದ 21 ಸೆಂಟ್ಸ್ ಜಾಗದಲ್ಲಿ ಸ್ನೇಹಾಲಯ ನಿರ್ಮಿಸಲಾಗಿದ್ದು, ಇಂದು ಸಂಸ್ಥೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಇದುವರೆಗೆ 1600ರಷ್ಟು ಮಂದಿ ಮಾನಸಿಕ ಅಸ್ವಸ್ಥರನ್ನು ಬೀದಿಗಳಿಂದ ರಕ್ಷಿಸಿ ತಂದು ಆರೈಕೆ ಮಾಡಿ, 1300 ಮಂದಿಯನ್ನು ಅವರ ಮನೆಗೆ ಕಳುಹಿಸಿಕೊಡಲಾಗಿದೆ. 300 ಮಂದಿ ಇಂದಿಗೂ ಕೇಂದ್ರದಲ್ಲಿ ಉತ್ತಮ ಜೀವನ ಸಾಗಿಸುತ್ತಿದ್ದು, ಇವರ ಮನೆಯವರನ್ನು ಗುರುತಿಸಿ ಕಳುಹಿಸಿ ಕೊಡುವ ವ್ಯವಸ್ಥೆ ನಡೆಯುತ್ತಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಇಲ್ಲಿ ಪ್ರತ್ಯೇಕ ಕೇಂದ್ರಗಳಿದ್ದು, ಉಚಿತ ಆಹಾರ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೇಂದ್ರದ ವತಿಯಿಂದ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ ಎಂದು ತಿಳಿಸಿದರು.

2ರಂದು ಬೆಳಗ್ಗೆ 9.30ಕ್ಕೆ ಅನಿವಾಸಿ ಭಾರತೀಯ ಉದ್ಯಮಿ, ಮೈಕೆಲ್ ಡಿ.ಸೋಜ ನೂತನ ಕೇಂದ್ರವನ್ನು ಉದ್ಘಾಟಿಸವರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ದಾನಾ ಆಶೀರ್ವಚನ ನೀಡುವರು. ದೆಹಲಿ ಧರ್ಮಪ್ರಾಂತ್ಯದ ಸಹಾಯಕ ಧರ್ಮಾಧ್ಯಕ್ಷ ದೀಪಕ್ ವಲೇರಿಯನ್ ತಾವೊ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು, ಧಾರ್ಮಿಕ ಜ್ಞಾನಿ ಆತ್ಮಾದಾಸ್ ಯಾಮಿ ಮುಖ್ಯ ಭಾಷಣ ಮಾಡುವರು. ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್, ಶಾಸಕರಾದ ಸಿ.ಎಚ್.ಕುಞಂಬು, ಎ.ಕೆ.ಎಂ ಅಶ್ರಫ್, ಪತ್ರಕರ್ತ ವಾಲ್ಟರ್ ನಂದಳಿಕೆ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು. ಒಲಿವಿಯಾ ಕ್ರಾಸ್ತ, ಥಾಮಸ್ ಡಿ. ಸಓಜ, ಜೋಬಿಯಲ್ ಮ್ಯಾಥ್ಯೂ, ಕ್ಲಿಂಟ್ ಜೋಸೆಫ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net