ಬಂಟ್ವಾಳ: ಕೊರಗ ಸಮುದಾಯದ ಕುಂದು–ಕೊರತೆಗಳನ್ನು ಆಲಿಸಲು ಇಲಾಖಾ ಅಧಿಕಾರಿಗಳ ಸಹಿತ ತಾನು ಖುದ್ದು ತೆರಳಿ ಸಮಸ್ಯೆ ಪರಿಶೀಲಿಸಿ, ಪರಿಹರಿಸಲು ಪ್ರಯತ್ನಿಸುವುದಾಗಿ ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಹೇಳಿದರು. ಬಿ.ಸಿ.ರೋಡ್‌ನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೊರಗ ಸಮುದಾಯದ ಕುಂದು–ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜೀವ್ ಗಾಂಧಿ ವಸತಿ ನಿಲಯದಲ್ಲಿ ಕೊರಗ ಸಮುದಾಯದವರಿಗೆ ನಿರ್ಮಾಣಗೊಂಡ ಬಹುತೇಕ ಆರ್‌ಸಿಸಿ ಮನೆಗಳು ಮಳೆಗಾಲದಲ್ಲಿ ಸೋರುತ್ತಿವೆ. ಕೇವಲ 3.5 ಲಕ್ಷ ರೂ.ನಲ್ಲಿ ಆರ್‌ಸಿಸಿ ಮನೆ ನಿರ್ಮಿಸುವುದು ಅವೈಜ್ಞಾನಿಕ. ಆದ್ದರಿಂದ ಕೇರಳ ಮಾದರಿಯಲ್ಲಿ ಮನೆ ನಿರ್ಮಾಣಕ್ಕೆ ಕನಿಷ್ಠ 6.5 ಲಕ್ಷ ರೂ. ಸಹಾಯಧನ ನೀಡಬೇಕು. ಈ ಬಗ್ಗೆ ಶಾಸಕರು ಸದನದಲ್ಲಿ ಸರ್ಕಾರವನ್ನು ಆಗ್ರಹಿಸಬೇಕು ಎಂದು ಕರ್ನಾಟಕ–ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಕೆ.ಪುತ್ರನ್ ಒತ್ತಾಯಿಸಿದರು.
ಸುಂದರಿ ಕನ್ಯಾನ ಮಾತನಾಡಿ, ಕೊರಗ ಸಮುದಾಯದ ಅನೇಕ ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಇನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವುದು ಹೇಗೇ? ಎಂದು ಪ್ರಶ್ನಿಸಿದರು. ಗ್ರಾಮೀಣ ಭಾಗದಲ್ಲಿ ಕೊರಗ ಸಮುದಾಯದವರಿಗೆ ಆಯುಷ್ಮಾನ್ ಕಾರ್ಡ್ ಸಿಕ್ಕಿಲ್ಲ. ಆಧಾರ್ ಕಾರ್ಡ್, ಚುನಾವಣಾ ಚೀಟಿ ಸಿಕ್ಕಿಲ್ಲ. ಈ ಬಗ್ಗೆ ಅಭಿಯಾನ ಆಗಬೇಕು. ಕೊರಗರಿಗೆ ಗ್ರಾ.ಪಂ.ಗಳಲ್ಲಿ 25ನೇ ಹಣಕಾಸು ನಿಧಿಯಡಿ 3/1 ಭಾಗ ಮೂಲಸೌಲಭ್ಯ ಒದಗಿಸಬೇಕು ಎಂದರು.
ನರಿಕೊಂಬು ಗ್ರಾ.ಪಂ ವ್ಯಾಪ್ತಿಯಲ್ಲಿ 3 ಫಲಾನುಭವಿಗಳ ಪೈಕಿ ಒಬ್ಬರಿಗೆ ಮಾತ್ರ ಸಿಂಟೆಕ್ಸ್ ಟ್ಯಾಂಕ್ ನೀಡಲಾಗಿದೆ ಎಂದು ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಪಂಚಾಯತಿ ಪ್ರತಿನಿಧಿ ಪ್ರತಿಕ್ರಿಯಿಸಿ ಎಲ್ಲರಿಗೂ ಟ್ಯಾಂಕ್ ನೀಡಿರುವುದಾಗಿ ತಿಳಿಸಿದರು. ಆದರೆ ನಮ್ಮ 2 ಮನೆಗೆ ಟ್ಯಾಂಕ್ ಸಿಕ್ಕಿಲ್ಲ ಎಂದು ಫಲಾನುಭವಿಗಳು ಸ್ಪಷ್ಟಪಡಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಸುನೀತಾ ಉಪಸ್ಥಿತರಿದರು. ವಿವಿಧ ಇಲಾಖಾಧಿಕಾರಿಗಳು, ಪಿಡಿಒಗಳು ಭಾಗವಹಿಸಿದ್ದರು.
ಡೇರೆ ನಿರ್ಮಿಸಿ ಬದುಕುವ ಪರಿಸ್ಥಿತಿ
ಕೊರಗರ ಸಭೆಯಲ್ಲಿ ಹೆಚ್ಚಿನ ಸಮಸ್ಯೆಗಳು ಜಮೀನಿಗೆ ಸಂಬಂಧಪಟ್ಟದ್ದಾಗಿರುವುದರಿಂದ ತಹಸೀಲ್ದಾರ್, ಕಂದಾಯಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಕೆ.ಪುತ್ರನ್ ಒತ್ತಾಯಿಸಿದರು. ತಾಲೂಕಿನ ಕೆಲವೆಡೆ ನಿವೇಶನಕ್ಕೆ ಅರ್ಜಿ ಹಾಕಿದರೂ ಭೂಮಿ ಮಂಜೂರಾಗಿಲ್ಲ. ಸರ್ಕಾರದಿಂದ ಮಂಜೂರಾದ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಮಂಜೂರಾದ ನಿವೇಶನಕ್ಕೆ ಸಂಪರ್ಕ ರಸ್ತೆಯಿಲ್ಲ. ನೀರಿನ ಸೌಲಭ್ಯವಿಲ್ಲ. ವಿದ್ಯುತ್, ಶೌಚಗೃಹ ವ್ಯವಸ್ಥೆ ಇಲ್ಲ. ಈಗಲೂ ಟಾರ್ಪಾಲು ಹಾಸಿ, ಡೇರೆ ನಿರ್ಮಿಸಿ ಬದುಕುವ ಸ್ಥಿತಿ ಇದೆ ಎಂದು ಸಭೆಯ ಗಮನಕ್ಕೆ ತಂದರು.
ಡಿಸಿ ಮನ್ನಾ ಜಾಗದಲ್ಲಿ ಮರಗಳ್ಳತನ
ಕೊರಗ ಸಮುದಾಯದ ಬಹುತೇಕ ಫಲಾನುಭವಿಗಳು ಅನಕ್ಷರಸ್ಥರು. ಕಚೇರಿಗೆ ಬಂದು ಅರ್ಜಿ ನೀಡುವಷ್ಟು ಶಕ್ತರಲ್ಲ. ಆದ್ದರಿಂದ ಅವರ ಮನೆಗೆ ಸ್ವತಃ ಗ್ರಾಮಕರಣಿಕರು ತೆರಳಿ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸುವ ವ್ಯವಸ್ಥೆಯಾಗಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸುಂದರ ಶಾಸಕರ ಗಮನ ಸೆಳೆದರು. ಕನ್ಯಾನ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಡಿಸಿ ಮನ್ನಾ ಜಾಗದಲ್ಲಿ ಮರ ಕಳ್ಳತನ ನಡೆಯುತ್ತಿದೆ. ಈ ಬಗ್ಗೆ ಈ ಹಿಂದೆಯೇ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಆ ಜಾಗವನ್ನು ಅರ್ಹ ಕೊರಗರಿಗೆ ನೀಡಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸುಂದರಿ ಕನ್ಯಾನ ಒತ್ತಾಯಿಸಿದರು.
ವಿವೇಕಾನಂದರ ಮಾನವ ಕುಲ ಪಾಲಿಸಿ – ವಿವೇಕಾನಂದ ಜಯಂತಿ ಉದ್ಘಾಟಿಸಿ ಸ್ವಾಮಿ ಜಿತಕಾಮಾನಂದ ಸ್ವಾಮೀಜಿ