ಹರಿಯಾಣದಲ್ಲಿ ಸೀಮಾ, ಸ್ವೀಟಿ ಹೆಸರಲ್ಲಿ 22 ಬಾರಿ ಬ್ರೆಜಿಲ್‌ ಮಾಡೆಲ್ ವೋಟ್​: ಹೊಸ ಬಾಂಬ್​ ಸಿಡಿಸಿದ ರಾಹುಲ್! | Rahul Gandhi

Rahul gandhi Prss meet
Published on

ಚಂಡೀಗಢ: 2024 ರಲ್ಲಿ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಮತ ವಂಚನೆ ನಡೆದಿದೆ ಎಂದು ಆರೋಪಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), 2 ಕೋಟಿಯಷ್ಟು ಮತದಾರರಿರುವ ಹರಿಯಾಣದಲ್ಲಿ ಸುಮಾರು 25 ಲಕ್ಷ ಮತಕಳ್ಳತನ ನಡೆದಿದೆ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಬುಧವಾರ ( ನ 5) ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ರಾಹುಲ್​, ಒಟ್ಟು 2 ಕೋಟಿ ಮತದಾರರಿರುವ ಹರಿಯಾಣದಲ್ಲಿ 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ, ಇದರಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅನರ್ಹ ಮತದಾರರು ಮತ್ತು 19.26 ಲಕ್ಷ ಬಲ್ಕ್​ ಮತದಾರರು ಸೇರಿದ್ದಾರೆ ಇದರ ಅರ್ಥ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ, ಅಂದರೆ ಶೇಕಡಾ 12.5 ರಷ್ಟು, ಇದರ ಉದ್ದೇಶವೇ ಮೊಸದ ಮೂಲಕ ಕಾಂಗ್ರೆಸ್​ ಪಕ್ಷವನ್ನು ಸೋಲಿಸುವುದಾಗಿತ್ತು ಎಂದರು.

ಹರಿಯಾಣ ಫಲಿತಾಂಶವನ್ನೇ ಬದಲಿಸಲಾಗಿದೆ

ಹರಿಯಾಣ ಚುನಾವಣೆಯ ದಿನ ಎಲ್ಲಾ ಎಕ್ಸಿಟ್​ ಪೋಲ್​ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಗೆಲುವಿನ ಭವಿಷ್ಯ ನುಡಿದಿದ್ದವು, ಆದರೆ ಫಲಿತಾಂಶ ಬದಲಾಗಿ ಬಿಜೆಪಿ ಗೆಲುವು ಸಾಧಿಸಿವೆ ಎಂದರು. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಮಾಧ್ಯಮಗಳ ಮುಂದೆ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿರುವ ವೀಡಿಯೊವನ್ನು ಸಹ ಪ್ರದರ್ಶಿಸಿದರು. ಚುನಾವಣಾ ಆಯೋಗವು ಮನಸ್ಸು ಮಾಡಿದರೆ ಒಂದು ಸೆಕೆಂಡಿನಲ್ಲಿ ನಕಲಿ ಮತದಾರರನ್ನು ತೆಗೆದುಹಾಕಬಹುದು. ಆದರೆ ಅವರು ಏಕೆ ಅದನ್ನು ಮಾಡುತ್ತಿಲ್ಲ? ಕಾರಣ ಸ್ಪಷ್ಟ, ಅವರು ಬಿಜೆಪಿಗೆ ಸಹಾಯ ಮಾಡುತಿದ್ದಾರೆ ಎಂದು ಹೇಳಿದರು. ಇದೇ ವೇಳೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಂದೇ ರೀತಿಯ ಚಿತ್ರಗಳಿಗೆ ವಿಭಿನ್ನ ಹೆಸರುಗಳನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ನಿದರ್ಶನಗಳನ್ನು ತೋರಿಸಿದರು.

ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ತೋರಿಸುವ ಸ್ಲೈಡ್‌ಗಳನ್ನು ರಾಹುಲ್​ ಗಾಂಧಿ ಪ್ರದರ್ಶಿಸಿದ್ದು, ಅದರಲ್ಲಿ ಕಂಡುಬಂದ ಪ್ರಮುಖ ಅಂಶವೆಂದರೆ ಬ್ರೆಜಿಲ್‌ ಮೂಲದ ಮಾಡೆಲ್ ಒಬ್ಬಳ ಛಾಯಾಚಿತ್ರ. ಸೀಮಾ, ಸ್ವೀಟಿ ಮತ್ತು ಸರಸ್ವತಿ ಎಂಬ ವಿವಿಧ ಹೆಸರುಗಳಲ್ಲಿ ಮತದಾರರ ಪಟ್ಟಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ, ಅವರು ಒಟ್ಟು 22 ಬಾರಿ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಎರಡು ರಾಜ್ಯದಲ್ಲಿ ಒಬ್ಬರಿಂದಲೇ ಮತದಾನ

ಉತ್ತರ ಪ್ರದೇಶ ಮತ್ತು ಹರಿಯಾಣ ಎರಡರಲ್ಲೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ, ಮನೆ ಸಂಖ್ಯೆ 150 ರಲ್ಲಿ ವಾಸಿಸುವ ಬಿಜೆಪಿ ನಾಯಕ, ಪಲ್ವಾಲ್ ಜಿಲ್ಲಾ ಪರಿಷತ್ತಿನ ಉಪಾಧ್ಯಕ್ಷರ ವಿಳಾಸದಲ್ಲಿ 66 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿಯ ಮನೆಯಲ್ಲಿ 500 ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ನಾಯಕ ದಾಲ್ಚಂದ್​ ಯುಪಿ ಮತ್ತು ಹರಿಯಾಣ ಎರಡರಲ್ಲೂ ಮತ ಚಲಾಯಿಸುತ್ತಿದ್ದಾರೆ. ಮಥುರಾದ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಕೂಡ ಅದನ್ನೇ ಮಾಡುತ್ತಿದ್ದಾರೆ. ಇಂತಹ ವಿಷಯಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರು ಭಾರತದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ, ನಾವು ಚುನಾವಣಾ ಆಯೋಗವನ್ನು ಮಾತ್ರವಲ್ಲ, ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದ ರಾಹುಲ್​, ಚುನಾವಣಾ ಆಯೋಗ ಮತ್ತು ಬಿಜೆಪಿ ಒಪ್ಪಂದದಲ್ಲಿವೆ ಎಂಬ ಆರೋಪವನ್ನು ಪುನರಾವರ್ತಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net