

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಒಂದು ತಾಸು ಪ್ರಧಾನಿಗಳು ನಡೆಸಿದ ರೋಡ್ ಶೋವನ್ನ ಕಣ್ತುಂಬಿಕೊಳ್ಳು ಲಕ್ಷಾಂತರ ಜನರು ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲೂ ಕಾಯುತ್ತಾ ನಿಂತಿದ್ದರು. ಈ ವೇಳೆ ಭದ್ರತಾಲೋಪ ಕಂಡು ಬಂದಿದೆ. ಬಿಗಿ ಭದ್ರತೆಯನ್ನೂ ಮೀರಿ ಬ್ಯಾರಿಕೇಡ್ ದಾಟಿ ಬಾಲಕನೊಬ್ಬ ಹಾರ ಹಿಡಿದು ಪ್ರಧಾನಿ ಕಾರಿನತ್ತ ನುಗ್ಗಿ ಬಂದ ಘಟನೆ ಗುರುವಾರ ಮಧ್ಯಾಹ್ನ ನಡೆಯಿತು.
ಪ್ರಧಾನಿಗಳು ರೋಡ್ ಶೋ ನಡೆಸುತ್ತಿದ್ದ ವೇಳೆ ಖುದ್ದು ಮೋದಿ ಅವರ ಕೈಗೆ ಹೂವಿನ ಹಾರ ಕೊಡಲು ಬಾಲಕನೊಬ್ಬ ಹಾರ ಹಿಡಿದು ಮೋದಿ ಅವರ ಕಾರಿನತ್ತ ನುಗ್ಗಿದ್ದಾನೆ. ತಕ್ಷಣ ಬಾಲಕನನ್ನ ವಶಕ್ಕೆ ಪಡೆದು ಆತನ ಕೈಯಿಂದ ಹಾರವನ್ನ ಸಿಬ್ಬಂದಿ ಕಿತ್ತುಕೊಂಡರು. ಅತ್ತ ಆ ಹಾರವನ್ನ ಪಡೆದ ಮೋದಿ ಅದನ್ನು ತಮ್ಮ ಕಾರಿನ ಮೇಲೆ ಹಾಕಿದರು.
ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ಅವರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸೇರಿದಂತೆ ಬಹುತೇಕ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಆದರೂ ಬಾಲಕನೊಬ್ಬ ಬ್ಯಾರಿಕೇಡ್ ದಾಟಿ ಮೋದಿ ಅವರ ಕಾರಿನತ್ತ ನುಗ್ಗಿ ಕ್ಷಣ ಕಾಲ ಆತಂಕ ಸೃಷ್ಟಿಸಿದ್ದ.
‘