

ರಾಂಚಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಕಠಿಣ ಕಾನೂನಿನ ಅವಶ್ಯಕತೆಯಿದೆ. ಇದರ ನಡುವೆ ಭಾರತ ದಂಡ ಸಂಹಿತೆ(IPC Section) 498A ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ ಎಂದು ಜಾರ್ಖಂಡ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ಕಲಹ ಪ್ರಕರಣದ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿವೇದಿ ಅವರಿದ್ದ ಏಕಸದಸ್ಯ ಪೀಠವು ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳು 498A ಕಾನೂನು ದುರ್ಬಳಕೆ ಆಗಿರುವುದನ್ನು ಗಮನಿಸಿರುವುದಾಗಿ ಹೇಳಿದ್ದಾರೆ.
498A ಕಾನೂನನ್ನು ಜಾರಿಗೆ ತಂದಿರುವುದು ಮದುವೆಯೊಳಗಿನ ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸಲು ಈ ನಿರ್ದಿಷ್ಟ ನಿಬಂಧನೆಯನ್ನು ಪರಿಚಯಿಸಲಾಗಿದೆ. ಅದಾಗ್ಯೂ ಅದರ ದುರುಪಯೋಗವು ಕಳವಳಕಾರಿ ವಿಚಾರವಾಗಿದ್ದು, ಅನೇಕ ಗಂಡಂದರಿಗೆ ಇದರ ಮೂಲಕ ಅನ್ಯಾಯವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಈ ಕಾನೂನನ್ನು ಬಳಸಿಕೊಂಡು ಪತಿ, ಅತ್ತೆ, ಮಾವನನ್ನು ಕ್ಷುಲಕ ಕಾರಣಕ್ಕೆ ಸಿಲುಕಿಸುತ್ತಿದ್ದಾರೆ. ಈ ರೀತಿಯ ಕಾನೂನು ದುರುಪಯೋಗವು ಅನೇಕ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರಿದೆ. ಇದು ಸಾಮಾಜಿಕ ಮತ್ತು ಭಾವನಾತ್ಮಕ ಯಾತನೆಗೆ ಕಾರಣವಾಗುತ್ತಿದೆ ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿವೇದಿ ಅವರಿದ್ದ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.