

ರಾಂಚಿ: 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಗ್ಯಾಂಗ್ಸ್ಟರ್ನನ್ನು ಸಾಧುಗಳ ವೇಷದಲ್ಲಿ ಬಂದು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾದವನನ್ನು ಅಮರನಾಥ್ ಸಿಂಗ್ ಎಂದು ಗುರುತಿಸಲಾಗಿದ್ದು, ಶ್ರಾವಣ ಮಾಸದ ಪ್ರಯುಕ್ತ ದುಮ್ಕಾದಲ್ಲಿರುವ ಬಸುಕಿನಾಥ್ ದೇವಾಲಯಕ್ಕೆ ಕುಟುಂಬಸ್ಥರ ಜೊತೆ ಪೂಜೆ ಸಲ್ಲಿಸಲು ಬಂದಿದ್ದ ವೇಳೆ ಕೊಲೆ ಮಾಡಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದುಮ್ಕಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಬರ್ ಲಕ್ರಾ ಘಟನೆಯು ಬಸುಕಿನಾಥ್ ದೇವಾಲಯ ಬಳಿ ಇರುವ ನಂದಿ ಚೌಖ್ ಬಳಿ 12:45ರ ಸುಮಾರಿಗೆ ಸಂಭವಿಸಿದೆ. ಹತ್ಯೆಯಾದ ಅಮರನಾಥ್ ವಿರುದ್ಧ 30ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಬಾಕಿಯಿದ್ದವು.
ಇದು ಪೂರ್ವ ನಿಯೋಜಿತ ಕೊಲೆಯಾಗಿದ್ದು, ಹಳೇ ವೈಷಮ್ಯದ ವಿಚಾರವಾಗಿ ಹತ್ಯೆ ಮಾಡಿರಬಹುದು. ಘಟನೆ ನಡೆದ ಸ್ಥಳದ ಸುತ್ತ ಸಿಸಿಟಿವಿ ಕ್ಯಾಮರಾಗಳ ಪರಿಶೀಲಿಸಲಾಗುತ್ತಿದ್ದು, ಆರು ಕಾಟ್ರಿಡ್ಜ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಶ್ರಾವಣ ಮಾಸದ ಪ್ರಯುಕ್ತ ಬಸುಕಿನಾಥ್ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಧು ಸಂತರು ಆಗಮಿಸುತ್ತಾರೆ. ಇದರ ಪ್ರಯೋಜನ ಪಡೆದ ಆರೋಪಿಗಳು ಅವರಂತೆ ವೇಷ ತೊಟ್ಟು ಕೃತ್ಯ ಎಸಗಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ದುಮ್ಕಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಬರ್ ಲಕ್ರಾ ತಿಳಿಸಿದ್ಧಾರೆ.