ಒಂದು ನಿಮಿಷ ತಡವಾಗಿದ್ದಕ್ಕೆ ರಾಜ್ಯಪಾಲರನ್ನೇ ಬಿಟ್ಟು ಹಾರಿದ ವಿಮಾನ

Air Asia
Published on

ಬೆಂಗಳೂರು: ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋತ್​ ತಡವಾಗಿ ಆಗಮಿಸಿದರು ಎಂಬ ಕಾರಣಕ್ಕೆ ಅವರನ್ನು ಬಿಟ್ಟು ಏರ್​ಏಷ್ಯಾ ವಿಮಾನವು​ ಹಾರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಗವರ್ನರ್​ ಆಫೀಸ್​ ಅಧಿಕಾರಿಗಳು ಸಂಸ್ಥೆಯ ವಿರುದ್ಧ ದೂರು ದಾಖಲಿಸಿದ್ದಾರೆ.

ರಾಜ್ಯಪಾಲರ ಕಚೇರಿ ಅಧಿಕಾರಿಗಳು ಈ ಸಂಬಂಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್​ ಠಾಣೆಯಲ್ಲಿ ಫ್ರೋಟೋಕಾಲ್​ ಉಲ್ಲಂಘನೆ ಎಂದು ದೂರು ದಾಖಲಿಸಿದ್ದಾರೆ.

ನಿರ್ಲಕ್ಷ್ಯ

ಗುರುವಾರ ಮಧ್ಯಾಹ್ನ 2 ಘಂಟೆಗೆ ರಾಜ್ಯಪಾಲರು ಬೆಂಗಳೂರಿನಿಂದ ಹೈದರಾಬಾದ್​ಗೆ ತೆರಳಬೇಕಿತ್ತು. ರಾಜ್ಯಪಾಲರನ್ನು ವಿಐಪಿ ಲಾಂಜ್​ನಲ್ಲಿ ಕುಳ್ಳಿರಿಸಿದ್ದ ಅಧಿಕಾರಿಗಳು ಅವರ ಲಗೇಜ್​ಅನ್ನು ಏರ್​ಏಷ್ಯಾ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ಲಗ್ಗೇಜ್​ ತೆಗೆದುಕೊಂಡ ಸಿಬ್ಬಂದಿ ಅವರು ಬರುವುದು ಒಂದು ನಿಮಿಷ ತಡವಾಗಿದ್ದಕ್ಕೆ ಬಿಟ್ಟು ಹೊರಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು ರಾಜ್ಯಪಾಲರು ಮಧ್ಯಾಹ್ನ 1:30ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಫ್ರೋಟೋಕಾಲ್​ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವರಿಗೆ ವಿಮಾನ ತಪ್ಪಿದೆ. ನಂತರ ಬದಲಿ ವಿಮಾನದಲ್ಲಿ ಅವರು ಹೈದರಾಬಾದಿಗೆ ಪ್ರಯಾಣ ಬೆಳೆಸಿದ್ದರು.

ವಿಐಪಿ ಲಾಂಜ್​ನಲ್ಲಿ ರಾಜ್ಯಪಾಲರನ್ನು ಕುಳ್ಳಿರಿಸಿ ವಿಮಾನ ನಿಲ್ದಾಣದವರ ಜೊತೆ ಮಾತುಕತೆ ನಡೆಸುವಲ್ಲಿ ಎಡವಿದ್ದು, ಈ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಗೆ ಆದೇಶಿಸಿದ ಸಂಸ್ಥೆ

ರಾಜ್ಯಪಾಲರನ್ನು ಬಿಟ್ಟು ಹಾರಾಟ ನಡೆಸಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಏರ್​ಏಷ್ಯಾ ವಿಮಾನ ಸಂಸ್ಥೆಯು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂಬಂಧ ನಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ರಾಜ್ಯಪಾಲರ ಕಚೇರಿಯ ಸಿಬ್ಬಂದಿ ಜೊತೆಗೆ ಸಂಪರ್ಕದಲ್ಲಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಏರ್​ಏಷ್ಯಾ ಸಂಸ್ಥೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net