ಕಲಾಪದಲ್ಲಿ ಜಂಟಿ ಸಮರ; ಬಿಜೆಪಿ-ಜೆಡಿಎಸ್​ ನಾಯಕರಿಂದ ರಹಸ್ಯ ಸಮಾಲೋಚನೆ

Suvarna VidhanaSoudha
Published on

ಬೆಂಗಳೂರು: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.4ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ವಿರುದ್ಧ ಪಟ್ಟಾಗಿ ಕುಸ್ತಿಗೆ ಇಳಿಯಲು ದೋಸ್ತಿಗಳು ಸಜ್ಜಾಗಿದ್ದಾರೆ.

ರೇಸ್​ಕೋರ್ಸ್ ರಸ್ತೆಯಲ್ಲಿನ ಅಪಾರ್ಟ್​ವೆುಂಟ್​ವೊಂದರಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ರಹಸ್ಯ ಸಮಾಲೋಚನೆ ನಡೆಸಿ, ಸದನದಲ್ಲಿ ಹೂಡಲಿರುವ ಜಂಟಿ ಸಮರದ ತಂತ್ರಗಳಿಗೆ ಅಂತಿಮ ಸ್ಪರ್ಶ ನೀಡಿದರು. ರಾಜ್ಯದ ಹಿತ, ರಚನಾತ್ಮಕವಾಗಿ ಜವಾಬ್ದಾರಿ ನಿರ್ವಹಣೆ, ಸದನದ ಅಮೂಲ್ಯ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳುವ ವಿಚಾರದಲ್ಲಿ ಉಭಯ ಪಕ್ಷಗಳು ಬದ್ಧವಾಗಿರಲು ಸಮ್ಮತಿಸಿವೆ. ವೈಫಲ್ಯಗಳನ್ನು ಎತ್ತಿ ಹಿಡಿಯುವ, ಕಟ್ಟಿಹಾಕುವ ಕಾರ್ಯ

ತಂತ್ರಗಳನ್ನು ಹಳಿ ತಪ್ಪಿಸಲು ಸರ್ಕಾರವು ಪ್ರಯತ್ನಿಸುವ ಸಾಧ್ಯತೆ ಗಳಿದ್ದು, ಈ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡಬೇಕು. ರಾಜ್ಯದ ಜನತೆಗೆ ಅದರಲ್ಲೂ ಉತ್ತರ ಕರ್ನಾಟಕದ ಜನತೆಗೆ ಪ್ರತಿಪಕ್ಷಗಳ ಒಲವು-

ನಿಲುವಿನ ಬಗ್ಗೆ ಸ್ಪಷ್ಟ ಸಂದೇಶವನ್ನೂ ರವಾನಿಸಬೇಕು ಎಂಬ ನಿಟ್ಟಿನಲ್ಲಿ

ತಂತ್ರ ಹೆಣೆದಿದ್ದಾರೆ. ಗದ್ದಲ, ಕೋಲಾಹಲವೆಬ್ಬಿಸಿ ವಿಷಯಾಂತರಕ್ಕೆ ಕಾರಣವಾಗುವ, ಪ್ರತಿಪಕ್ಷಗಳತ್ತಲೇ ಬೊಟ್ಟು ಮಾಡಿ ತೋರಿಸುವ ಸರ್ಕಾರದ ನುಡಿ-ನುಡಿಯನ್ನೂ ಸೂಕ್ಷ್ಮವಾಗಿ ಗ್ರಹಿಸಬೇಕು ಎಂದು ಉಭಯ ಪಕ್ಷಗಳ ನಾಯಕರು ಮಾತಾಡಿಕೊಂಡಿದ್ದಾರೆ.

ಜಂಟಿ ಹಾಗೂ ಪ್ರತ್ಯೇಕವಾಗಿ ಪ್ರಸ್ತಾಪಿಸಬೇಕಾದ ವಿಷಯಗಳ ಪಟ್ಟಿಯನ್ನು ಮಾಡಿಕೊಂಡಿದ್ದು, ವಿಸõತ ಚರ್ಚೆಗೆ ಅವಕಾಶ ಗಿಟ್ಟಿಸಿಕೊಳ್ಳುವ ರೀತಿಯಲ್ಲಿ ಪ್ರಯತ್ನಗಳಿರಬೇಕು. ಪ್ರತ್ಯೇಕ ವಿಷಯಗಳ ಪಟ್ಟಿಯಲ್ಲಿ ಒಬ್ಬರು ಪ್ರಸ್ತಾಪಿಸಿದರೆ ಮತ್ತೊಬ್ಬರು ಚರ್ಚೆ ಮುಂದುವರಿಸಿ, ಎಲ್ಲ ಆಯಾಮಗಳಿಂದ ಸದನ ‘ಫಲಪ್ರದ’ಗೊಳಿಸುವ ಪ್ರಯತ್ನ ಮುಖ್ಯ ಎನ್ನುವ ಸಂಕಲ್ಪ ಮಾಡಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಎಫೆಕ್ಟ್ ಸದನದಲ್ಲಿ ಇಣುಕಿಹಾಕಲಿದೆ. ಲೋಕಸಭೆ ಚುನಾವಣೆ ಪೂರ್ವ ಸಿದ್ಧತೆಗಾಗಿ ಈ ವೇದಿಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂಬುದನ್ನು ಸಭೆ ವಿಶೇಷವಾಗಿ ಗಮನಿಸಿತು ಎಂದು ಮೂಲಗಳು ತಿಳಿಸಿವೆ. ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಜಿ.ಟಿ. ದೇವೇಗೌಡ ಸೇರಿ ಹಲವರು ಭಾಗವಹಿಸಿದ್ದರು.

ಪ್ರತಿಕ್ರಿಯೆಗೆ ನಕಾರ: ಸಭೆಯ ನಂತರ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಆದರೆ ಜಂಟಿ ಸಭೆಯ ಕುರಿತು ಮಾಹಿತಿ ಹಂಚಿಕೊಳ್ಳಲಿಲ್ಲ. ಎಲ್ಲ ವಿಷಯಗಳನ್ನು ರ್ಚಚಿಸಿದ್ದೇವೆ. ಮುಂದೆ ಮಾತನಾಡುವೆ ಎಂದು ಹೇಳಿದರೆ, ಬಿ.ವೈ.ವಿಜಯೇಂದ್ರ ಏನನ್ನೂ ಮಾತನಾಡದೇ ಕೈಮುಗಿದು ಹೊರಟರು.

ಅವಕಾಶಗಳ ಕೋರಿಕೆಗೂ ಜಂಟಿ ಬಂಧ: ವಿಧಾನಸಭಾಧ್ಯಕ್ಷ ಹಾಗೂ ಸಭಾಪತಿಗೆ ಚರ್ಚೆ ಅವಕಾಶಗಳ ಕೋರಿಕೆಯಲ್ಲೂ ‘ಜಂಟಿ ಬಂಧ’ಕ್ಕೆ ಉಭಯ ಪಕ್ಷಗಳ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ. ಒಂದೇ ವಿಷಯಕ್ಕೆ ಇಬ್ಬರೂ ಪ್ರತ್ಯೇಕವಾಗಿ ಪತ್ರ ಸಲ್ಲಿಸುವುದರಿಂದ ಸ್ಪಷ್ಟೀಕರಣಕ್ಕೆ ಕಾಲಹರಣ ಹಾಗೂ ಅನಗತ್ಯ ಗೊಂದಲ ಎಂಬ ಕಾರಣಕ್ಕೆ ನಿಲುವಳಿ ಸೂಚನೆ, ಸಾರ್ವಜನಿಕ ಮಹತ್ವದ ತುರ್ತು ವಿಷಯಗಳು ಸೇರಿ ಕಾರ್ಯಕಲಾಪ ಗಳ ವಿವಿಧ ನಿಯಮಗಳಡಿ ಸ್ಪೀಕರ್/ ಸಭಾಪತಿಗೆ ಜಂಟಿಯಾಗಿ ಪತ್ರ ಸಲ್ಲಿಸಲು ತೀರ್ವನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಸೂಚಿ?

  • ಬರ ಪರಿಹಾರ ನಿರ್ವಹಣೆ ವೈಫಲ್ಯ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ
  • ವರ್ಗಾವಣೆ ದಂಧೆ, ತನಿಖೆ ಹೆಸರಲ್ಲಿ ಕಮಿಷನ್ ಕಿರಿಕ್, ವ್ಯಾಪಕ ಭ್ರಷ್ಟಾಚಾರ
  • ಗ್ಯಾರಂಟಿ ಯೋಜನೆಗಳ ಓರೆಕೋರೆ, ವಂಚಿತ ಅರ್ಹರು, ಪ್ರಚಾರದ ಅಬ್ಬರ
  • ಮಹತ್ವದ ನೀರಾವರಿ ಯೋಜನೆಗಳು ಸೇರಿ ಅಭಿವೃದ್ಧಿ ಕಾಮಗಾರಿ ಸ್ತಬ್ಧ
  • ಉತ್ತರಕರ್ನಾಟಕದ ಪ್ರಮುಖ ಯೋಜನೆ, ಜ್ವಲಂತ ಸಮಸ್ಯೆಗಳತ್ತ ಫೋಕಸ್

ಪ್ರತ್ಯೇಕವಾಗಿ ಪ್ರಸ್ತಾಪ?

  • ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್
  • ಸಚಿವ ಜಮೀರ್ ಅಹಮದ್ ಖಾನ್ ‘ಸ್ಪೀಕರ್ ಪೀಠ’ದ ಹೇಳಿಕೆ
  • ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿಯುವ ಮನಸ್ಥಿತಿ
  • ಎಚ್. ಕಾಂತರಾಜು, ನ್ಯಾ.ಎ.ಜೆ. ಸದಾಶಿವ, ನ್ಯಾ. ಭಕ್ತವತ್ಸಲ ವರದಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net