ಕುಮಟಾದಲ್ಲಿ ‘ರಾಜವೀರ ಮದಕರಿ ನಾಯಕ’; ಎರಡನೇ ಹಂತದ ಶೂಟಿಂಗ್​ಗೆ ಲೊಕೇಷನ್​ ಫಿಕ್ಸ್

collage (10)
Published on

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್ ದರ್ಶನ್​ ನಾಯಕತ್ವದಲ್ಲಿ ರಾಜವೀರ ಮದಕರಿ ನಾಯಕ ಸಿನಿಮಾ ಬರಲಿದೆ ಎಂಬುದಷ್ಟೇ ಇಲ್ಲಿಯವರೆಗಿನ ಮಾಹಿತಿಯಾಗಿತ್ತು. ಕೇರಳ ಶೂಟಿಂಗ್​ ಬಳಿಕ ಎರಡನೇ ಹಂತದ ಶೂಟಿಂಗ್​ ಯಾವಾಗಿನಿಂದ ಎಂಬುದರ ಬಗ್ಗೆ ಚಿತ್ರತಂಡ ಇನ್ನೂ ಹೇಳಿಕೊಂಡಿಲ್ಲ. ಆದರೆ, ಚಿತ್ರೀಕರಣ ಪೂರ್ವ ಕೆಲಸಗಳು ಮಾತ್ರ ಜೋರಾಗಿಯೇ ನಡೆಯುತ್ತಿವೆ. ಅದರಂತೆ, ಚಿತ್ರೀಕರಣಕ್ಕೆ ಲೊಕೇಷನ್​ ಹುಡುಕಾಟಕ್ಕೆ ತಂಡ ಉತ್ತರ ಕನ್ನಡದ ಕುಮಟಾದಲ್ಲಿ ಬೀಡು ಬಿಟ್ಟಿದೆ.

ಚಿತ್ರದ ಮೊದಲ ಹಂತದ ಶೂಟಿಂಗ್​ ಈಗಾಗಲೇ ಕೇರಳದ ಹಲವೆಡೆ ಮುಗಿಸಿಕೊಳ್ಳಲಾಗಿದೆ. ಚಿತ್ರದುರ್ಗದಲ್ಲಿ ಶೂಟಿಂಗ್​ ನಡೆಯಲಿದೆ. ಈಗಾಗಲೇ ಅಲ್ಲಿನ ಲೊಕೇಷನ್​ಗಳನ್ನು ಅಂತಿಮ ಮಾಡಲಾಗಿದೆ. ಅದಾದ ಬಳಿಕ ಎರಡನೇ ಹಂತದ ಚಿತ್ರೀಕರಣ ಎಲ್ಲಿ ಎಂಬ ವಿಚಾರ ಬಂದಾಗ, ನೇರವಾಗಿ ಕುಮಟಾದಲ್ಲಿ ಮಿರ್ಜಾನ್​ ಕೋಟೆಯನ್ನು ವೀಕ್ಷಣೆ ಮಾಡಿ ಆ ಲೊಕೇಷನ್​ ಆಯ್ದುಕೊಂಡಿದೆ ಚಿತ್ರತಂಡ.

ಇತ್ತೀಚೆಗಷ್ಟೇ ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟ ದೊಡ್ಡಣ್ಣ, ಛಾಯಾಗ್ರಾಹಕ ಅಶೋಕ್ ಕಶ್ಯಪ್ ಮತ್ತಿತರರು ಲೊಕೇಷನ್​ ನೋಡಲು ಹೋಗಿದ್ದರು. ಅದರಂತೆ ಆ ಫೋಟೋವನ್ನು ಚಿತ್ರ ನಿರ್ಮಾಣ ಸಂಸ್ಥೆ ರಾಕ್​ಲೈನ್​ ಎಂಟರ್ಟೈನ್ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಕಾತರಕ್ಕೆ ಸರ್ಪ್ರೈಸ್​ ಉಡುಗೊರೆ ನೀಡಿದೆ.


ಅಂದಹಾಗೆ, ರಾಕ್​ಲೈನ್​ ವೆಂಕಟೇಶ್​ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಸುಮಲತಾ ಅಂಬರೀಷ್ ಸಹ ಮುಖ್ಯ ಭೂಮಿಕೆಯಲ್ಲಿರಲಿದ್ದಾರೆ. ಸದ್ಯ ಲೊಕೇಷನ್​ ಅಂತಿಮ ಮಾಡಿರುವ ತಂಡ ಯಾವಾಗ ಶೂಟಿಂಗ್ ಆರಂಭಿಸಿದಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net