ಮತ್ತೆ ಕಡಲ್ಕೊರೆತ ಭೀತಿ

sea erosion
Published on

ಕೋಟ: ಕೋಟ, ಕೋಟತಟ್ಟು, ಕೋಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಡಲ ಕಿನಾರೆ ಈ ವರ್ಷ ಮಳೆಗಾಲದಲ್ಲಿ ಕೊರೆತಕ್ಕೊಳಗಾಗುವ ಭೀತಿ ಎದುರಾಗಿದೆ. ಇದರಲ್ಲಿ ಮಣೂರು ಪಡುಕರೆಯ ಪ್ರವಾಸಿಗರನ್ನು ಆಕರ್ಷಿಸುವ ಕಡಲ ಕಿನಾರೆಯ ತಡೆಗೋಡೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ. ಹೀಗಾಗಿ ಮಳೆ ಅಥವಾ ಚಂಡಮಾರುತದಿಂದ ಸಾಕಷ್ಟು ಭೂ ಭಾಗ ಕಡಲ್ಕೊರೆತಕ್ಕೊಳಗಾಗುವ ಭೀತಿ ಸ್ಥಳೀಯರಿಗೆ ಎದುರಾಗಿದೆ.

ಕೆಲವರ್ಷಗಳ ಹಿಂದೆ ಶಾಶ್ವತ ತಡೆಗೋಡೆ ನಿರ್ಮಾಣಗೊಂಡಿದ್ದರೂ ವರ್ಷ ಕಳೆದಂತೆ ಇದರ ಭಾರಿ ಗಾತ್ರದ ಕಲ್ಲುಗಳು ಕುಸಿಯುತ್ತಿವೆ. ಇಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಎತ್ತರಕ್ಕಿಂತ ಹೆಚ್ಚಿನ ಕುಸಿತ ಕಾಣುತ್ತಿದೆ. ಅಳವಡಿಸಿದ ತಡೆಗೋಡೆ ಕಲ್ಲುಗಳು ಸಮುದ್ರ ಸೇರುತ್ತಿವೆ. ಹಾಗಿದ್ದರೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಂಡಿಲ್ಲ.

ಪ್ರತಿವರ್ಷ ಮಳೆಗಾಲ ಬಂತ್ತೆಂದರೆ ಕೋಟ ಹಾಗೂ ಕೋಟ ತಟ್ಟು, ಕೋಡಿ ಗ್ರಾಪಂ ವ್ಯಾಪ್ತಿಯಲ್ಲಿ ವಿಪರೀತ ಕಡಲ್ಕೊರೆತ ಸಂಭವಿಸುತ್ತದೆ. ಸಚಿವರು ಶಾಸಕರು ಕಡಲ್ಕೊರೆತ ಸ್ಥಳಗಳಿಗೆ ಭೇಟಿ ನೀಡಿ ಭರವಸೆ ನೀಡಿ ಹಿಂತಿರುಗುತ್ತಾರೆ. ಆದರೆ ಯಾವ ಆಶ್ವಾಸನೆಯೂ ಈಡೇರಿಲ್ಲ. ಈ ವ್ಯಾಪ್ತಿಯ ಬೀಚ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಮುದ್ರ ಕೊರೆತ ಸಂಭವಿಸಿದರೆ ಇಲ್ಲಿನ ರಸ್ತೆ ಹಾನಿಗೊಳಗಾಗುವುದರಲ್ಲಿ ಅನುಮಾನವಿಲ್ಲ. ಜತೆಗೆ ಮನೆಗಳಿಗೂ ಹಾನಿಯಾಗಬಹುದು.

ಶಾಶ್ವತ ತಡೆಗೋಡೆ ಮರೀಚಿಕೆ

ಕೋಟ, ಕೋಟತಟ್ಟು, ಕೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಾನಿಗೊಳಗಾಗುವ ಪ್ರದೇಶಗಳಿವೆ. ಮಣೂರು ಪಡುಕರೆ ರಸ್ತೆ ಕಡು ಮೀನು ಕಟ್ಟಿಂಗ್ ಪ್ರದೇಶ, ಕಳೆದ ಹಲವು ಚಂಡಮಾರುತಗಳಿಗೆ ಹಾನಿಗೊಂಡ ಮಣೂರು ಫಿಶರ್‌ಮೆನ್ ರಸ್ತೆ, ಕೋಟತಟ್ಟು ಪಡುಕರೆ ಸಾಹಿರಾಬಾನು ಮನೆ ಸಮೀಪ, ಕೋಡಿ ಗ್ರಾಪಂ ಹೊಸಬೆಂಗ್ರೆ ಲೈಟ್‌ಹೌಸ್ ಬಳಿ, ಕೋಡಿ ಕನ್ಯಾಣ ರಾಮಮಂದಿರ ಸಮೀಪ ಪ್ರದೇಶಗಳು ಪ್ರತಿ ವರ್ಷ ಸಮುದ್ರ ಕೊರೆತಕ್ಕೀಡಾಗುತ್ತಿದೆ. ಇಲ್ಲಿನ ಪರಿಸರದ ಜನ ಭಯದಲ್ಲಿ ಬದುಕುತ್ತಿದ್ದಾರೆ.

ತಡೆಗೋಡೆಗೆ ಆಗ್ರಹ

ಪ್ರತಿವರ್ಷ ಸಮುದ್ರ ಕೊರೆತಕ್ಕೀಡಾಗುವ ಈ ಎಲ್ಲಾ ಪ್ರದೇಶಗಳಲ್ಲಿ ಮಳೆಗಾಲಕ್ಕೂ ಮುನ್ನ ಶಾಶ್ವತ ತಡೆಗೋಡೆ ನಿರ್ಮಿಸಿದರೆ ಯಾವುದೇ ರೀತಿಯ ಹಾನಿ ಸಂಭವಿಸಲಾರದು ಎನ್ನುವುದು ಸ್ಥಳೀಯರ ಅಭಿಪ್ರಾಯ. ಇಲ್ಲಿ ಸಾಕಷ್ಟು ಮನೆಗಳಿದ್ದು ಭಯದಲ್ಲಿ ಬದುಕುವಂತಾಗಿದೆ. ಹಾಗಾಗಿ ಶೀಘ್ರ ತಡೆಗೋಡೆ ನಿರ್ಮಿಸಲು ಇಲ್ಲಿನ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.

ಪ್ರತಿವರ್ಷ ಕೋಡಿಯ ಹೆಚ್ಚಿನ ಭೂಭಾಗ ಸಮುದ್ರ ಸೇರುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಭೇಟಿ ನೀಡಿ ಆಶ್ವಾಸನೆ ನೀಡಿ ಹಿಂತಿರುಗುತ್ತಾರೆ. ಆದರೆ ಶಾಶ್ವತ ತಡೆಗೋಡೆ ಮರೀಚಿಕೆಯಾಗಿದೆ. ಶೀಘ್ರ ತಡೆಗೋಡೆ ನಿರ್ಮಿಸಿದರೆ ಇಲ್ಲಿನ ರಸ್ತೆ, ಮನೆ, ಜನರು ಬದುಕಬಹುದು.-ಅಣ್ಣಪ್ಪ ಕುಂದರ್, ಕೋಡಿ ನಿವಾಸಿ

ಕೋಟ ಮಣೂರು ಪಡುಕರೆ ರಸ್ತೆ ಕಡು, ಫಿಶರ್‌ಮೆನ್ ರಸ್ತೆ ಪ್ರತಿವರ್ಷ ಕಡಲ್ಕೊರೆತ ಆಗುತ್ತಿದೆ. ಜನಪ್ರತಿನಿಧಿಗಳು ಬಂದು ಕಣ್ಣಾಯಿಸಿ ಹೋಗುತ್ತಾರೆ. ತಡೆಗೋಡೆ ಕಾಮಗಾರಿ ಇದುವರೆಗೆ ಆಗಿಲ್ಲ. ಪ್ರವಾಸಿಗರ ಆಕರ್ಷಣೆಯ ಪ್ರದೇಶ ಇದು. ಜತೆಗೆ ಹಲವು ನಿವಾಸಿಗಳು ಇಲ್ಲಿದ್ದೇವೆ. ಈ ಪ್ರದೇಶಕ್ಕೆ ಶೀಘ್ರ ಶಾಶ್ವತ ತಡೆಗೋಡೆ ನಿರ್ಮಿಸಬೇಕು.-ಶಶಿಧರ ತಿಂಗಳಾಯ, ಮಣೂರು ಪಡುಕರೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net