ಉಡುಪಿ: ನಗರದಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಕಿದಿಯೂರು ಗರಡಿ ರಸ್ತೆಯಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಕಳೆದ 1 ತಿಂಗಳಿನಿಂದ ಪಂಚಾಯಿತಿ ನಳ್ಳಿಯಲ್ಲಿ ಹನಿ ನೀರು ಕೂಡ ಬಂದಿಲ್ಲ. ಪ್ರಸ್ತುತ ಗ್ರಾಪಂ ವತಿಯಿಂದ 5 ದಿನಕ್ಕೊಮ್ಮೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, ದೈನಂದಿನ ಬಳಕೆ ಬೇಕಾದಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗದೆ ಸಮಸ್ಯೆ ಎದುರಿಸುವಂತಾಗಿದೆ.
ಕಿದಿಯೂರು ಗರಡಿ ರಸ್ತೆ, ಸಂಕೇಶ ರಸ್ತೆ ಸೇರಿದಂತೆ ಅಂಬಲಪಾಡಿ ಪಂಚಾಯಿತಿ ವ್ಯಾಪ್ತಿಯ ಅನೇಕ ಕಡೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಪಂಚಾಯಿತಿಯಿಂದ 3 ಅಥವಾ 5 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ 300 ಲೀ. ನೀರು ಕೊಡುತ್ತಿದ್ದಾರೆ. ಮನೆಯಲ್ಲಿ 4-5 ಮಂದಿ ಇದ್ದರೆ ಅಲ್ಪಪ್ರಮಾಣದ ನೀರು ನಿತ್ಯಕರ್ಮಗಳಿಗೂ ಸಾಲುತ್ತಿಲ್ಲ. ಹೀಗಾಗಿ ಸ್ಥಳೀಯರು ಪ್ರತಿ ಮೂರು ದಿನಕ್ಕೊಮ್ಮೆ ಖಾಸಗಿಯಾಗಿ 600 ರೂ. ನೀಡಿ 3,000 ಲೀ. ನೀರು ತರಿಸಿಕೊಳ್ಳುತ್ತಿದ್ದಾರೆ.
ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ನೀಡುವಾಗ ರಸ್ತೆಯಲ್ಲಿ ಪಾತ್ರೆಗಳನ್ನಿಟ್ಟು ನೀರನ್ನು ತುಂಬಿಸಿಕೊಳ್ಳಬೇಕು. ಮನೆಯ ಅಂಗಳದಲ್ಲಿರುವ ಸಿಂಟೆಕ್ಸ್ ಅಥವಾ ಸಂಪ್‌ಗೆ ನೀರನ್ನು ಸರಬರಾಜು ಮಾಡುವುದಿಲ್ಲ. ಹೀಗಾಗಿ ರಸ್ತೆ ಬದಿಯ ನೀರನ್ನು ಮತ್ತೆ ತೆಗೆದುಕೊಂಡು ಹೋಗಿ ಡ್ರಮ್‌ಗಳಿಗೆ ಭರ್ತಿ ಮಾಡುತ್ತಿದ್ದಾರೆ. ಕೆಲವರು ಈ ಸಮಸ್ಯೆಯೇ ಬೇಡವೆಂದು ಖಾಸಗಿಯಾಗಿ ಹಣ ನೀಡಿ ನೀರು ಖರೀದಿಸಿ ಸಿಂಟೆಕ್ಸ್ ತುಂಬಿಸಿಕೊಳ್ಳುತ್ತಿದ್ದಾರೆ.
ಕಿದಿಯೂರು ಗರಡಿ ರಸ್ತೆಯಲ್ಲಿ 65 ವರ್ಷ ಪ್ರಾಯದ ವಾರಿಜಾ ಅವರ ಮನೆ ಸೇರಿದಂತೆ 3-4 ಮನೆಗಳಿಗೆ ಸಂಪರ್ಕ ರಸ್ತೆಗಳಿಲ್ಲ. ಹೀಗಾಗಿ ಟ್ಯಾಂಕರ್ ಸೇರಿದಂತೆ ನಾಲ್ಕು ಚಕ್ರದ ವಾಹನಗಳು ಮನೆ ಬಳಿಗೆ ಹೋಗುವುದಿಲ್ಲ. ಹೀಗಾಗಿ ಸುಮಾರು 300 ಮೀಟರ್‌ವರೆಗೆ ನೀರನ್ನು ಕೊಡಪಾನದಲ್ಲಿ ಹೊತ್ತುಕೊಂಡು ಸಾಗಿ ಮನೆಯಲ್ಲಿ ತುಂಬಿಸಿಕೊಳ್ಳಬೇಕು.