

-ನರೇಂದ್ರ ಎಸ್. ಮರಸಣಿಗೆ ಹೆಬ್ರಿ
ಹೆಬ್ರಿಯಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಪಂಚಾಯಿತಿಗಳಿಗೆ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಮುದ್ರಾಡಿ, ಕುಚ್ಚೂರು, ಚಾರ, ಶಿವಪುರ ಹಾಗೂ ಬೆಳ್ವೆಯಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸೂಕ್ತವಾದ ನೀರಿನ ಮೂಲವಿಲ್ಲದ ಕಾರಣ ನೀರು ಪೂರೈಕೆ ಆಡಳಿತಕ್ಕೆ ಸವಾಲಾಗಿದೆ.
ಎಲ್ಲ ತೋಡುಗಳು, ಸಣ್ಣ ಹಳ್ಳಗಳು,ಬಾವಿ ಹಾಗೂ ಕೊಳವೆಬಾವಿಗಳು ಬತ್ತಿ ಹೋಗಿವೆ. ಹೊಸ ಕೊಳವೆ ಬಾವಿ ಕೊರೆದರು ನೀರಿಲ್ಲ. ಸಾರ್ವಜನಿಕ ಬಾವಿಗಳಲ್ಲಿ ನೀರಿನ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಕೆರೆಗಳಂತೂ ಒಣಗಿವೆ. ಹೀಗಾಗಿ ನೀರು ಸರಬರಾಜು ಮಾಡುವುದು ಹೇಗೆ ಎಂಬುದು ಸ್ಥಳೀಯ ಆಡಳಿತಕ್ಕೆ ಚಿಂತೆಯ ವಿಷಯವಾಗಿದೆ.
ಘಟ್ಟ ಪ್ರದೇಶದಲ್ಲಿ ಮಳೆಯಾಗಿರುವುದರಿಂದ ಸೀತಾ ನದಿಯ ಕಿಂಡಿಣೆಕಟ್ಟೆ ತುಂಬಿ ಕೆಲವು ಭಾಗಗಳಿಗೆ ನೀರು ಪೂರೈಸಲು ಯಾವುದೇ ತೊಡಕಿಲ್ಲ.ಸಣ್ಣ ಸಣ್ಣ ತೋಡುಗಳು, ಬಾವಿ, ಕೆರೆಗಳು ತುಂಬಲು ಮಳೆ ಬರಬೇಕು.
ಹಳ್ಳಿಯಲ್ಲಿ ನೀರಿಲ್ಲದೆ ಅಡಕೆ, ಕಾಳುಮೆಣಸು, ತೆಂಗು, ಬಾಳೆ ಕೃಷಿ ಒಣಗುತ್ತಿದೆ. ತೆಂಗಿನಗಿಡ ಮಳೆಯಾದ ನಂತರ ಜೀವ ಪಡೆಯುತ್ತವೆೆ. ಆದರೆ ಅಡಕೆ ಸಸಿಗಳು ಒಮ್ಮೆ ಬಾಡಿದರೆ ಸತ್ತೇ ಹೋಗುತ್ತವೆ.
ಪಂಚಾಯಿತಿಗಳು ನೀರಿನ ಮೂಲವಿಲ್ಲದೆ ಟ್ಯಾಂಕರ್‌ನಲ್ಲಿ ಪೂರೈಸಲು ಕೂಡ ಅಸಹಾಯಕವಾದಾಗ ಮುದ್ರಾಡಿ ಹಾಗೂ ಕುಚ್ಚೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ದಾನಿಗಳು ನಿರಂತರವಾಗಿ ಕುಡಿಯುವ ನೀರು ದಾನ ಮಾಡಿ ಕರಟಿ ಹೋಗುತ್ತಿದ್ದರೂ ಜನರಿಗೆ ಅಗತ್ಯ ಎಂದು ಭಾವಿಸಿ ದಾನಿಗಳು ನೀರು ನೀಡಿದ್ದಾರೆ.
ಸದ್ಯ ಸೀತಾನದಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಿಂಡಿ ಅಣೆಕಟ್ಟು ತುಂಬಿದೆ. ಚಾರ ಜೆಎನ್‌ವಿ ಬಳಿ 70 ಕೋಟಿ ರೂ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿರುವುದರಿಂದ. ಸೇತುವೆಯ ಕೆಳಭಾಗಕ್ಕೆ ನೀರಿನ ಸರಬರಾಜು ಆಗುತ್ತಿಲ್ಲ. ಆದ್ದರಿಂದ ಸೇತುವೆಯ ಕೆಳಭಾಗದಿಂದ ಸಮುದ್ರ ಸೇರುವ ತನಕ ನದಿಯ ಗುಂಡಿಗಳಲ್ಲಿರುವ ನೀರು ಕೂಡ ಖಾಲಿಯಾಗಿ ಜೀವ ಜಲಚರಗಳಿಗೆ ತೊಂದರೆಯಾಗಿದೆ.
ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವೆಡೆ ನೀರಿಲ್ಲದಿದ್ದರೂ ಪೈಪ್‌ಲೈನ್ ಮಾಡಿದ್ದಾರೆ. ಅದರಿಂದ ಯಾರಿಗೂ ನಯಪೈಸೆಯ ಪ್ರಯೋಜನ ಆಗಿಲ್ಲ. ಕುಡಿಬೈಲು ರಸ್ತೆಯಲ್ಲಿ ಗೇಟ್‌ವಾಲ್ ತೂತು ಬಿದ್ದಿದೆ. ಸುಮ್ಮನೆ ಪೈಪ್‌ಲೈನ್ ಮಾಡಿ ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ.
ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಹೊಸ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿಲ್ಲ. ಹಳೇ ಕೊಳವೆ ಬಾವಿಗಳು ಬತ್ತುತ್ತಿವೆ. ಸಾರ್ವಜನಿಕ ಬಾವಿಗಳು ನೀರಿನ ಅತ್ಯಂತ ಕನಿಷ್ಠ ಮಟ್ಟ ತಲುಪಿದೆ. ಮಳೆಯಾದಲ್ಲಿ ಮಾತ್ರ ಇದಕ್ಕೆಲ್ಲ ಪರಿಹಾರ ಸಿಗಲಿದೆ. ಸಾರ್ವಜನಿಕರು ನಮ್ಮ ಜತೆ ಸಹಕರಿಸಬೇಕು.-ಶಶಿಧರ್ ಕೆ.ಜೆ., ಇಒ, ಹೆಬ್ರಿ ತಾಲೂಕು ಪಂಚಾಯಿತಿ
ನೀರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಬೇಡಿಕೆ ಹೆಚ್ಚಿದೆ. ಟ್ಯಾಂಕರ್‌ಗಳ ಮೂಲಕ ನೀರು ಪೈರೈಕೆ ಮಾಡುತ್ತಿದ್ದಾರೆ. ಕೆಲವೊಂದು ಮನೆಗಳಿಗೆ ಸರಿಯಾದ ರೀತಿಯಲ್ಲಿ ನೀರು ಸರಬರಾಜಾಗುತ್ತಿಲ್ಲ ಅಂತ ದೂರುಗಳಿವೆ. ಕುಡಿಯುವ ನೀರಿನ ವಿವಿಧ ಯೋಜನೆಗಳನ್ನು ನೀಡಿದರು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಿದ್ದರೆ ಈ ರೀತಿ ತೊಂದರೆರೆಯಾಗುತ್ತಿರಲಿಲ್ಲ. ಒಟ್ಟಾರೆಯಾಗಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ಈ ಸಮಸ್ಯೆಗೆ ಕಾರಣವಾಗಿದೆ.-ಶ್ರೀಕಾಂತ್ ಕುಚ್ಚೂರು. ಕಾರ್ಕಳ ಜೆಡಿಎಸ್ ಅಧ್ಯಕ್ಷರು