

ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಪೈಕಿ ಮದರಂಗಿ ಕೃಷ್ಣ ಅಭಿನಯದ- ನಿರ್ದೇಶನದ ಲವ್ ಮಾಕ್ಟೇಲ್ ಚಿತ್ರ ಸಹ ಒಂದು. ಈ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಆದರೆ, ಲಾಕ್ಡೌನ್ನಿಂದಾಗಿ ಹೆಚ್ಚು ದಿನ ಪ್ರದರ್ಶನ ಕಾಣುವುದಕ್ಕೆ ಸಾಧ್ಯವಾಗಿರಲಿಲ್ಲ. ಆ ನಂತರ ಅಮೇಜಾನ್ ಪ್ರೈಮ್ನಲ್ಲಿ ಚಿತ್ರ ಬಿಡುಗಡೆಯಾಗಿ, ಇನ್ನೂ ಹೆಚ್ಚು ಜನಪ್ರಿಯತೆ ಪಡೆಯಿತು.
ಹೀಗಿರುವಾಗಲೇ ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ಪ್ರಸ್ತಾಪವಾಗಿದ್ದು, ಲವ್ ಮಾಕ್ಟೇಲ್ ಎಲ್ಲಿಗೆ ನಿಂತಿತ್ತೋ, ಅದನ್ನು ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದ ಕೃಷ್ಣ, ಕಥೆ-ಚಿತ್ರಕಥೆ ಬರೆಯುವುದಕ್ಕೆ ಶುರುವಿಟ್ಟುಕೊಂಡರು. ಕೆಲವು ದಿನಗಳ ಹಿಂದಷ್ಟೇ ಸ್ಕ್ರಿಪ್ಟ್ ಕೆಲಸ ಮುಗಿದಿತ್ತು. ಚಿತ್ರದ ಕಥೆಯನ್ನು ಕೇಳಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಮೊದಲ ಭಾಗಕ್ಕಿಂತ ಈ ಸೀಕ್ವೆಲ್ ಅದ್ಭುತವಾಗಿ ಮೂಡಿಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈಗ ಲವ್ ಮಾಕ್ಟೇಲ್ 2 ಚಿತ್ರದ ಸ್ಕ್ರಿಪ್ಟ್ ಕೆಲಸ ನಿನ್ನೆ ನಡೆದಿದೆ. ಕೃಷ್ಣ ಮತ್ತು ಮಿಲನಾ ನಾಗರಾಜ್ ಇಬ್ಬರೂ ದೇವಸ್ಥಾನವೊಂದರಲ್ಲಿ ಸ್ಕ್ರಿಪ್ಟ್ ಪೂಜೆ ಮುಗಿಸಿಕೊಂಡು ಬಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕೃಷ್ಣ, ಪ್ರೇಕ್ಷಕರ ಆಶೀರ್ವಾದ ಕೇಳಿದ್ದಾರೆ. ಅಷ್ಟೇ ಅಲ್ಲ, ಲವ್ ಮಾಕ್ಟೇಲ್ನ ಮ್ಯಾಜಿಕ್ ಮರುಸೃಷ್ಟಿಸುವ ವಿಶ್ವಾಸದಲ್ಲಿದ್ದಾರೆ.
ಲವ್ ಮಾಕ್ಟೇಲ್2ನ ಸ್ಕ್ರಿಪ್ಟ್ ಪೂಜೆಯೇನೋ ಮುಗಿದಿದೆ. ಇನ್ನು ಚಿತ್ರದ ಚಿತ್ರೀಕರಣ ಪ್ರಾರಂಭ ಯಾವಾಗ ಎಂಬ ಪ್ರಶ್ನೆ ಸಹಜವೇ. ಸದ್ಯಕ್ಕೆ ಹೊಸ ಚಿತ್ರಗಳ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಸರ್ಕಾರ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೊಸ ಚಿತ್ರಗಳ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಚಿತ್ರೀಕರಣ ಪ್ರಾರಂಭವಾಗಲಿದೆ.
ಲವ್ ಮಾಕ್ಟೇಲ್ ತಂಡವೇ ಇಲ್ಲೂ ಮುಂದುವರೆಯಲಿದೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್, ಛಾಯಾಗ್ರಾಹಕ-ಸಂಕಲನಕಾರ ಶ್ರೀ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ. ಇನ್ನು ಈ ಹೊಸ ಚಿತ್ರದಲ್ಲಿ ಕೃಷ್ಣ ಅಲ್ಲದೆ ಬೇರೆ ಯಾವ ಕಲಾವಿದರು ಹೊಸದಾಗಿ ಸೇರಿಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.