ಜಿಯಾ ಸಾವಿನ ತನಿಖೆಗೆ ಸಲ್ಮಾನ್ ಅಡ್ಡಗಾಲು!

Jiah - Salman
Published on

ಜಿಯಾ ಖಾನ್ ನೆನಪಿದೆಯಾ? ಅದೇ ‘ನಿಶ್ಯಬ್ಧ’ ಮುಂತಾದ ಚಿತ್ರಗಳಲ್ಲಿ ನಟಿಸಿದ ಈ ಚೆಲುವೆ, ಕೆಲವು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಆ ನಂತರ ಏನೆಲ್ಲಾ ಆಯಿತು ಎಂಬ ಸುದ್ದಿಯೇ ಇರಲಿಲ್ಲ. ಸುಶಾಂತ್ ಸಾವಿನ ಪ್ರಕರಣ ತನಿಖೆಯಾಗುತ್ತಿದ್ದು, ಇದೀಗ ಈ ಪ್ರಕರಣಕ್ಕೆ ಪುನಃ ಜೀವ ಬಂದಿದೆ. ಈ ಕೇಸ್ ಮುಚ್ಚಿ ಹಾಕುವಲ್ಲಿ ಸಲ್ಮಾನ್ ಪಾತ್ರ ದೊಡ್ಡದಿದೆ ಎಂದು ಜಿಯಾ ತಾಯಿ ರಾಬಿಯಾ ಅಮಿನ್ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಸುಶಾಂತ್ ಪ್ರಕರಣ ನೋಡಿದರೆ, ನನಗೆ ನನ್ನ ಮಗಳು ಜಿಯಾ ಆತ್ಮಹತ್ಯೆ ತನಿಖೆ ನೆನಪಾಗುತ್ತದೆ. 2015ರಲ್ಲಿ ಒಬ್ಬರು ಸಿಬಿಐ ಅಧಿಕಾರಿಯನ್ನು ಭೇಟಿಯಾಗುವುದಕ್ಕೆ ಹೋಗಿದ್ದೆ. ಆಗ ಅವರು ಸಲ್ಮಾನ್ ಖಾನ್ ತಮಗೆ ಪ್ರತಿ ದಿನ ಫೋನ್ ಮಾಡಿ, ಪ್ರಮುಖ ಆರೋಪಿಯಾದ ಸೂರಜ್ ಪಂಚೋಲಿಯನ್ನು ಅರೆಸ್ಟ್ ಮಾಡಬೇಡಿ ಎಂದು ಹೇಳಿದ್ದಾಗಿ ಹೇಳಿಕೊಂಡರು. ಹಾಗಾಗಿ ನಿಮ್ಮ ಮಗಳ ಪ್ರಕರಣ ಮುಂದುವರೆಯುತ್ತಲೇ ಎಂದು ಅವರು ಬೇಸರ ಮಾಡಿಕೊಂಡಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ ರಾಬಿಯಾ ಅಮಿನ್.

‘ಹೀಗೆ ಹಣ ಮತ್ತು ರಾಜಕೀಯದ ಬಲ ಪ್ರಯೋಗಿಸಿ ತನಿಖೆ ನಿಲ್ಲಿಸಿದರೆ, ಜನ ಸಾಮಾನ್ಯರಿಗೆ ನ್ಯಾಯ ಸಿಗುವುದು ಹೇಗೆ? ಜನ ಎಚ್ಚೆತ್ತುಕೊಳ್ಳಬೇಕು. ಅನ್ಯಾಯದ ವಿರುದ್ಧ ಹೋರಾಡಬೇಕು. ಬಾಲಿವುಡ್‌ನ ಇಂಥ ಕೆಟ್ಟ ಸಂಪ್ರದಾಯವನ್ನು ತೊಡೆದು ಹಾಕಬೇಕು’ ಎಂದು ರಾಬಿಯಾ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net