ಕುರುಕಲು ತಿಂಡಿ ಹೆಚ್ಚು ತಿನ್ನಬೇಡ ಎಂದು ಬೈದ ತಂದೆ; ಮನನೊಂದು ಪ್ರಾಣ ಕಳೆದುಕೊಂಡ ಪುತ್ರಿ

Junk Suicide
Published on

ಮುಂಬೈ: ಕುರುಕಲು ತಿಂಡಿ ಹೆಚ್ಚು ತಿನ್ನಬೇಡ ಎಂದು ಪೋಷಕರು ಬೈದು ಬುದ್ದಿವಾದ ಹೇಳಿದ್ದಕ್ಕೆ ಯುವತಿಯೊಬ್ಬಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ನಾಗ್ಪುರದ ವಿನೋದ್ ಧನ್ವಾನಿ ನಗರದ ಸಿಂಧಿ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಮೃತರನ್ನು ಭೂಮಿಕಾ (19) ಎಂದು ಗುರುತಿಸಲಾಗಿದೆ. ಈಕೆ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (BBA) ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಾಗ್ಪುರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಭೂಮಿಕಾ ಬಿಬಿಎ ವಿದ್ಯಾರ್ಥಿನಿಯಾಗಿದ್ದು, ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಕುರುಕಲು ತಿಂಡಿ ಹೆಚ್ಚು ತಿನ್ನಬೇಡ ಎಂದು ತಂದೆ ಬೈದಿದ್ದಕ್ಕೆ ಮನನೊಂದು ಅಡುಗೆ ಮನೆಯಲ್ಲಿ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅಡುಗೆ ಮನೆಯಲ್ಲಿ ಮಗಳು ನೇಣು ಬಿಗಿದುಕೊಂಡಿರುವುದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಆಕೆಯನ್ನು ನಾಗ್ಪುರ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ನಾಗ್ಪುರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net