ಖಡಕ್‌ ರೊಟ್ಟಿ-ಶೇಂಗಾ ಚಟ್ನಿಯೇ ನನಗಿಷ್ಟ ಎಂದ ಕನ್ನಡತಿ ಶ್ರೇಯಾಂಕಾ ಪಾಟೀಲ್‌; ವಿಡಿಯೋ ವೈರಲ್

Shreyanka Patil
Published on

ಬೆಂಗಳೂರು: ಇತ್ತೀಚಿಗೆ ಮುಕ್ತಾಯಗೊಂಡ ಎರಡನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಟೂರ್ನಿಯಲ್ಲಿ ಸರ್ವಾಂಗೀಣ ಪ್ರದರ್ಶನದಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವನಿತೆಯರು ಸುದೀರ್ಘ ಕಾಯುವಿಕೆಯನ್ನು ಕೊನೆಗಾಣಿಸಿದ್ದು, ಈ ಸಲ ಕಪ್​ ನಮ್ಮದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ನಡುವೆ ಬೆಂಗಳೂರು ತಂಡದಲ್ಲಿರುವ ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ್‌, ಕನ್ನಡಿಗರ ಮನಗೆದ್ದಿದ್ದಾರೆ. ಟೂರ್ನಿಯಲ್ಲಿ ಬರೋಬ್ಬರಿ 13 ವಿಕೆಟ್‌ ಕಬಳಿಸುವ ಮೂಲಕ, ಬೆಂಗಳೂರಿನ ಹುಡುಗಿ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. ಒಂದೆಡೆ ಆರ್‌ಸಿಬಿ ಕಪ್‌ ಗೆಲುವಿನ ಖುಷಿಯಾದರೆ, ಶ್ರೇಯಾಂಕಾ ಪಾಟೀಲ್‌ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದು ಅಭಿಮಾನಿಗಳ ದುಪ್ಪಟ್ಟು ಖುಷಿಗೆ ಕಾರಣವಾಗಿದೆ. ಈ ನಡುವೆ ಶ್ರೇಯಾಂಕಾ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ನನಗೆ ಪಿಜ್ಜಾ ಬರ್ಗರ್‌ ತಿನ್ನುವಾಗ ಅಷ್ಟೊಂದು ಖುಷಿಯಾಗಲ್ಲ. ಅದು ನಾಲಗೆಗೆ ರುಚಿ ಕೊಡಲ್ಲ. ನನಗೆ ಖಡಕ್‌ ರೊಟ್ಟಿ ಜೊತೆ ಎಣ್ಣೆಗಾಯಿ, ಶೇಂಗಾ ಚಟ್ನಿ ಕೊಟ್ರೆ ಈಗಲೇ ಇಲ್ಲೇ ಕೂತು ತಿನ್ನುತ್ತೇನೆ. ನನಗೆ ಅಷ್ಟು ಇಷ್ಟ ಅದು. ಅದರಲ್ಲೂ ನಮ್ಮ ಅಮ್ಮ ಮತ್ತೆ ಅಜ್ಜಿ ಮಾಡೋ ರೊಟ್ಟಿ ತುಂಬಾ ಇಷ್ಟ. ಅವರು ತುಂಬಾ ಚೆನ್ನಾಗಿ ಮಾಡ್ತಾರೆ. ಅದನ್ನು ತಿಂದರೇನೇ ಸಂತೃಪ್ತಿ ಸಿಗೋದು. ಅದು ನಮ್ಮೂರಿನ ಊಟ ಅನ್ನೋ ಭಾವನೆ. ಅದು ತಿನ್ನುವಷ್ಟು ಖುಷಿ ಬೇರೆಲ್ಲೂ ಸಿಗಲ್ಲ ಎಂದು ಶ್ರೇಯಾಂಕಾ ಹೇಳಿದ್ದಾರೆ.

ಕನ್ನಡತಿ ಮಾತನಾಡಿರುವ ಹಳೆಯ ವಿಡಿಯೋ ಈಗ ವೈರಲ್‌ ಆಗಿದ್ದು, ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ. ಈ ಬಾರಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ ಟೂರ್ನಿಯಲ್ಲಿ ಆರ್​ಸಿಬಿ ಕಪ್​ ಗೆಲ್ಲುವಲ್ಲಿ ಶ್ರೇಯಾಂಕಾ ಪಾಟೀಲ್​ ಕೊಡುಗೆ ಅಪಾರ ಎಂದೇ ಹೇಳಬಹುದಾಗಿದೆ. ಒಟ್ಟು 8 ಪಂದ್ಯಗಳನ್ನು ಆಡಿರುವ ಕನ್ನಡಿತಿ ಶ್ರೇಯಾಂಕಾ ಪಾಟೀಲ್​ 7.30ರ ಸರಾಸರಿಯಲ್ಲಿ 13 ವಿಕೆಟ್‌ ಪಡೆದಿದ್ದಾರೆ. ರಡು ಬಾರಿ ಮೂರು ವಿಕೆಟ್‌ ಸಾಧನೆ ಮಾಡಿದ್ದಾರೆ. ಪರ್ಪಲ್‌ ಕ್ಯಾಪ್‌ ಜೊತೆಗೆ ಟೂರ್ನಿಯ ಎಮರ್ಜಿಂಗ್‌ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net