

ಗುರುಪುರ: ಶಾಲಾ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಇದು ಸಾಧನೆಗೆ ಹಾದಿಯಾಗಿದ್ದು, ಪ್ರತಿಭೆಗಳ ಅನಾವರಣ ಇಲ್ಲಿಂದಲೇ ಆಗಬೇಕು. ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಅವೆರಡನ್ನೂ ಸವಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದಾದಾಗ ಜೀವನ ಸುಗಮವಾಗುತ್ತದೆ ಎಂದು ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆವಾಡು ಹೇಳಿದರು.
ವಾಮಂಜೂರಿನ ಎಸ್ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟ ಗುರುವಾರ ಉದ್ಘಾಟಿಸಿ ಮಾತನಾಡಿದರು.
ಪ್ರೌಢಶಾಲಾ ಮುಖ್ಯಶಿಕ್ಷಕ ರಮೇಶ್ ಆಚಾರ್ಯ ವಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪಾಠ ಮತ್ತು ಪಠ್ಯೇತರ ಚಟುವಟಿಕೆ ಅವಶ್ಯ. ಅದರಿಂದ ಜೀವನಾನುಭವ ಹೆಚ್ಚುತ್ತದೆ. ಮನಸ್ಸು ಮತ್ತು ಬದುಕು ಅರಳುವಂತೆ ವಾಡಬೇಕೇ ವಿನಾ, ಅದು ಯಾವತ್ತೂ ಮುದುಡಿ ಹೋಗಬಾರದು. ವಿದ್ಯಾರ್ಥಿ ಜೀವನದಿಂದಲೇ ಶಿಸ್ತು ಇದ್ದಲ್ಲಿ, ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.
ವಿದ್ಯಾರ್ಥಿ ನಾಯಕಿ ಭವಿತಾ ಹಾಗೂ ಶಿಕ್ಷಕ ವೃಂದ ಕ್ರೀಡಾಕೂಟ ನಡೆಸಿಕೊಟ್ಟರು. ಕ್ರೀಡಾ ನಾಯಕ ನಮನ್ ಕ್ರೀಡಾ ಪ್ರತಿಜ್ಞೆಗೈದರು. ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಹರಿಣಾಕ್ಷಿ ವಂದಿಸಿದರು.