₹100 ದಂಡ ಕಟ್ಟಲು 50-50 ಪೈಸೆ ಕೊಟ್ಟ ಸುಪ್ರೀಂಕೋರ್ಟ್‌ ವಕೀಲರು!

supreme court
Published on

ನವದೆಹಲಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರಿಗೆ ಸುಪ್ರೀಂಕೋರ್ಟ್‌ 100 ರೂಪಾಯಿ ದಂಡ ವಿಧಿಸಿತ್ತು. ಆದರೆ ಈ ದಂಡಕ್ಕೆ ಅನೇಕ ವಕೀಲರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನಾ ರೂಪವಾಗಿ ಎಲ್ಲ ವಕೀಲರು ತಲಾ 50-50 ಪೈಸೆಯನ್ನು ದಂಡಕ್ಕೆ ಒಳಗಾಗಿರುವ ವಕೀಲರಿಗೆ ನೀಡಿ 100 ರೂಪಾಯಿ ಮಾಡಿ ಅದನ್ನು ಕೋರ್ಟ್‌ಗೆ ಕಟ್ಟಿದ್ದಾರೆ!

ರೀಪಕ್‌ ಕನ್ಸಲ್‌ ಎಂಬ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠ ದಂಡ ವಿಧಿಸಿತ್ತು.

ಅಷ್ಟಕ್ಕೂ ಆಗಿರುವುದು ಏನೆಂದರೆ, ರೀಪಕ್‌ ಅವರು ಸುಪ್ರೀಂಕೋರ್ಟ್‌ ರೆಜಿಸ್ಟ್ರಿ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಪ್ರತಿದಿನವೂ ವಿಚಾರಣೆಗೆ ಸಂಬಂಧಿಸಿದಂತೆ ಒಂದು ಪಟ್ಟಿಯನ್ನು ರೆಡಿ ಮಾಡಲಾಗುತ್ತದೆ. ಯಾವ ದಿನ ಯಾರ ಕೇಸ್‌ ಬರಬೇಕು, ಯಾವ ಪ್ರಕರಣ ಎಷ್ಟನೇ ನಂಬರ್‌ನಲ್ಲಿ ಇರಬೇಕು ಎಂಬ ಬಗ್ಗೆ ಪಟ್ಟಿ ರೆಡಿ ಮಾಡಲಾಗುತ್ತದೆ. ಆ ಪಟ್ಟಿಯ ಅನ್ವಯವೇ ದಿನವೂ ಆಯಾ ನ್ಯಾಯಮೂರ್ತಿಗಳ ಮುಂದೆ ವಿಚಾರಣೆ ಬರುತ್ತದೆ.

ಇದನ್ನು ಮಾಡುವುದು ಆಯಾ ಕೋರ್ಟ್‌ಗಳ ರೆಜಿಸ್ಟ್ರಿ ವಿಭಾಗದ ಸಿಬ್ಬಂದಿ. ಅದರಂತೆಯೇ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ವಿಭಾಗದ ಸಿಬ್ಬಂದಿ ಈ ಪಟ್ಟಿ ತಯಾರು ಮಾಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎನ್ನುವುದು ವಕೀಲರಾದ ದೀಪಕ್‌ ಅವರ ಆರೋಪವಾಗಿತ್ತು. ದೊಡ್ಡ ದೊಡ್ಡ ಲಾ ಫರ್ಮ್‌ಗಳ ಹಾಗೂ ಪ್ರಸಿದ್ಧ ವಕೀಲರು ವಾದ ಮಂಡಿಸುವ ಕೇಸ್‌ಗಳನ್ನು ಮೊದಲಿಗೆ ಹಾಕಲಾಗುತ್ತಿದೆ. ಅವರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅವರಿಗೆ ಹೇಗೆ ಬೇಕೋ ಹಾಗೆ ಲಿಸ್ಟ್‌ ರೆಡಿ ಮಾಡಲಾಗುತ್ತಿದೆ. ಇದರಿಂದ ಇತರ ವಕೀಲರಿಗೆ ಅನ್ಯಾಯವಾಗುತ್ತಿದೆ ಎನ್ನುವುದು ಅವರ ಆರೋಪವಾಗಿತ್ತು.

ಇದು ರೀಪಕ್‌ ಮಾತ್ರವಲ್ಲದೇ ಸುಪ್ರೀಂಕೋರ್ಟ್‌ನ ಹಲವಾರು ವಕೀಲರ ಅಸಮಾಧಾನಕ್ಕೂ ಇದು ಕಾರಣವಾಗಿದೆ. ಇದರ ವಿರುದ್ಧ ರೀಪಕ್‌ ಅರ್ಜಿ ಸಲ್ಲಿಸಿದ್ದರು. ತಮ್ಮಂಥ ವಕೀಲರಿಗೆ ನ್ಯಾಯ ಕೊಡಿಸಬೇಕು ಎಂದು ಅವರು ಕೋರಿದ್ದರು.

ಆದರೆ ನ್ಯಾಯಮೂರ್ತಿಗಳು ಈ ವಾದವನ್ನು ಒಪ್ಪಲಿಲ್ಲ. ಈ ರೀತಿಯ ಆರೋಪಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದಿದ್ದ ನ್ಯಾಯಮೂರ್ತಿಗಳು ಅರ್ಜಿ ಸಲ್ಲಿಸಿದ್ದಕ್ಕಾಗಿ 100 ರೂಪಾಯಿ ದಂಡ ವಿಧಿಸಿದ್ದರು.

ಇದು ಹಲವಾರು ವಕೀಲರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಆದೇಶದ ಪ್ರತಿಭಟನಾರ್ಥವಾಗಿ ಎಲ್ಲ ವಕೀಲರು 50-50 ಪೈಸೆ ನೀಡಿ 100 ರೂಪಾಯಿ ಮಾಡಿ ಅದನ್ನು ದಂಡದ ರೂಪದಲ್ಲಿ ಕಟ್ಟಿದ್ದಾರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net